ಸಾರಾಂಶ
ಗದಗ: ನಂದಿ (ಎತ್ತು) ಆಧಾರಿತ ಉಳಿಮೆಯಿಂದ ಸುಸ್ಥಿರ ಭೂ ಫಲವತ್ತತೆ ಕಾಯ್ದುಕೊಂಡು ಸುರಕ್ಷಿತ ಹಾಗೂ ಸುಸ್ಥಿರ ಆಹಾರ ಭದ್ರತೆ ನಮ್ಮ ಪೂರ್ವಜರು ಹೊಂದಿದ್ದರು. ಇದನ್ನು ಮತ್ತೆ ಪುನರುತ್ಥಾನಗೊಳಿಸುವ ಉದ್ದೇಶದಿಂದ ಜ. 26, 27 ಮತ್ತು 28 ಮೂರು ದಿನಗಳ ಕಾಲ ಚೆನ್ನಮ್ಮನ ಕಿತ್ತೂರಿನಿಂದ ಕಪ್ಪತಗುಡ್ಡದವರೆಗೆ ನಂದಿಭೂಷಿತ ಕಪ್ಪತಜ್ಯೋತಿ ಯಾತ್ರೆ ನಡೆಯಲಿದೆ ಎಂದು ಕಪೋತಗಿರಿ ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಹೇಳಿದರು.ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವೆಲ್ಲರೂ ಇಂದು ರಾಸಾಯನಿಕ ಕೃಷಿಯೆಡೆಗೆ ಆಕರ್ಷಿತಗೊಂಡಿರುವದರಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಆಹಾರ ಉತ್ಪಾದನೆಯಲ್ಲಿ ಇಳುವರಿ ಹಾಗೂ ಗುಣಮಟ್ಟದಲ್ಲಿ ಕುಸಿತವಾಗಿದ್ದರಿಂದ ರೈತರು ಸಂಕಷ್ಟಕ್ಕೆ ಇಡಾಗಿದ್ದಾರೆ, ಹಾಗಾಗಿ ನಂದಿ ಕೃಷಿಗೆ ಪುನರುತ್ಥಾನದ ಅವಶ್ಯಕತೆ ಇದ್ದು, ರೈತರು ಪುನಃ ನಂದಿ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸುವದಕ್ಕಾಗಿ ಯಾತ್ರೆ ನಡೆಸಲಾಗುತ್ತಿದೆ ಎಂದರು.
ಜ. 26 ರ ಭಾನುವಾರ ಸಂಜೆ 4 ಕ್ಕೆ ಕಿತ್ತೂರ ಸಮೀಪದ ನಿಚ್ಚಣಕಿ ಗ್ರಾಮದಲ್ಲಿ ಯಾತ್ರೆ ಆರಂಭವಾಗಿ 27 ರಂದು ಸೋಮವಾರ ಬೆಳಗ್ಗೆ 9 ಕ್ಕೆ ನಂದಿ ಪೂಜೆ ಹಾಗೂ ದೀಪ ಪ್ರಜ್ವಲನ ಕಾರ್ಯಕ್ರಮ, 9:15 ಕ್ಕೆ ನಂದಿ ಜ್ಯೋತಿ ಯಾತ್ರೆಯು ಕಿತ್ತೂರು ಚೆನ್ನಮ್ಮ ಕೋಟೆ ಮುಂಭಾಗದಿಂದ ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಗಲಿದೆ. ಜ್ಯೋತಿ ಯಾತ್ರೆಯು 11 ಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ತಲುಪಿ ಅಲ್ಲಿ ನಂದಿ ಕೊಟ್ಟಿಗೆಯಲ್ಲಿ ನಂದಿ ಪೂಜೆ ನೆರವೇರಿಸಿ 11.30 ಕ್ಕೆ ನಂದಿ ಕೃಷಿ ಸಂಕಲ್ಪಪ್ರಥಮ ವೇದಿಕೆ ಕಾರ್ಯಕ್ರಮವು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜರುಗಲಿದೆ.ಜ. 28 ರಂದು ಮಂಗಳವಾರ ಬೆಳಗ್ಗೆ 7 ಕ್ಕೆ ನವನಗರದಿಂದ ಹೊರಡುವ ಜ್ಯೋತಿ ಯಾತ್ರೆಯು ಹುಬ್ಬಳ್ಳಿಯ ಲಿಂಗರಾಜ ನಗರದ ಸಮುದಾಯ ಭವನಕ್ಕೆ ತಲುಪಿ ಪೂಜಾ ಕಾರ್ಯಕ್ರಮ ನಡೆಯಲಿದೆ. ನಂತರ ಹುಬ್ಬಳ್ಳಿ ನಗರ ಪ್ರದಕ್ಷಿಣೆ ಮಾಡಿ ಗದಗ ನಗರಕ್ಕೆ 11 ಕ್ಕೆ ಡಂಬಳ ನಾಕಾದ ಹತ್ತಿರದ ನಂದಿವೇರಿ ಸಂಸ್ಥಾನ ಮಠಕ್ಕೆ ಆಗಮಿಸಿ ಅಲ್ಲಿ ಪೂಜಾ ಕಾರ್ಯಕ್ರಮ ಪೂರ್ಣಗೊಂಡ ನಂತರ ಗದಗ ನಗರ ಪ್ರದಕ್ಷಿಣೆ ಮಾಡಿ 12.45 ಕ್ಕೆ ಯಾತ್ರೆಯು ಡೊಣಿ ಗ್ರಾಮಕ್ಕೆ ತಲುಪಿ ಮಂಗಲವಾದ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಯಲಿದೆ.
ನಂತರ ಕಪ್ಪತ್ತಗುಡ್ಡದಲ್ಲಿರುವ ನಂದಿವೇರಿ ಸಂಸ್ಥಾನಮಠಕ್ಕೆ ತಲುಪಿ ಮಧ್ಯಾಹ್ನ 1:30 ಕ್ಕೆ ಕಪ್ಪತ್ತಗುಡ್ಡದಲ್ಲಿರುವ ಬಂಗಾರ ಕೋಳ್ಳದ ತೀರ್ಥೋದ್ಭವದ ಪುಣ್ಯ ತೀರ್ಥ ಸಮರ್ಪಣೆ ಜರುಗಲಿದೆ. ಸಂಜೆ 4 ಕ್ಕೆ ಸಚಿವ ಎಚ್. ಕೆ.ಪಾಟೀಲರ ಸಮ್ಮುಖದಲ್ಲಿ ಶಿವಕುಮಾರ ಶ್ರೀಗಳ ಆಶೀರ್ವಚನದೊಂದಿಗೆ ನಂದಿಭೂಷಿತ ಕಪ್ಪತ್ತಜ್ಯೋತಿ ಯಾತ್ರೆ ಮಂಗಲಗೊಳ್ಳಲಿದ್ದು, ಈ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಸಾರ್ವಜನಿಕರು ಹಾಗೂ ಮಠದ ಸದ್ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಮದು ಶ್ರೀಗಳು ಮನವಿ ಮಾಡಿದರು.ಈ ಸುದ್ದಿಗೋಷ್ಠಿಯಲ್ಲಿ ಬಾಲಚಂದ್ರ ಜಾಬಶೆಟ್ಟಿ, ರುದ್ರಣ್ಣ ಗುಳಗುಳಿ, ದೇವರಡ್ಡಿ ಅಗಸನಕೊಪ್ಪ, ಗಣೇಶಸಿಂಗ್ ಬ್ಯಾಳಿ ಹಾಗೂ ಡೊಣಿ ಗ್ರಾಮದ ಭಕ್ತರು ಉಪಸ್ಥಿತರಿದ್ದರು.