ನಂದಿ ರಥಯಾತ್ರೆ ಮಂಗಳೂರು ಪುರಪ್ರವೇಶ

| Published : Mar 29 2025, 12:33 AM IST

ಸಾರಾಂಶ

ಗೋ ಸೇವಾ ಗತಿವಿಧಿ ಕರ್ನಾಟಕ ಹಾಗೂ ಬಂಟ್ವಾಳದ ಪುದು ರಾಧಾ ಸುರಭಿ ಗೋಮಂದಿರ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನಂದಿ ರಥಯಾತ್ರೆ ಶುಕ್ರವಾರ ಮಂಗಳೂರು ಪುರ ಪ್ರವೇಶ ಮಾಡಿದ್ದು, ನಗರದ ಪಂಪ್‌ವೆಲ್‌ನ ಮಹಾವೀರ ವೃತ್ತದ ಬಳಿ ರಥಯಾತ್ರೆಯನ್ನು ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಗೋ ಸೇವಾ ಗತಿವಿಧಿ ಕರ್ನಾಟಕ ಹಾಗೂ ಬಂಟ್ವಾಳದ ಪುದು ರಾಧಾ ಸುರಭಿ ಗೋಮಂದಿರ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನಂದಿ ರಥಯಾತ್ರೆ ಶುಕ್ರವಾರ ಮಂಗಳೂರು ಪುರ ಪ್ರವೇಶ ಮಾಡಿದ್ದು, ನಗರದ ಪಂಪ್‌ವೆಲ್‌ನ ಮಹಾವೀರ ವೃತ್ತದ ಬಳಿ ರಥಯಾತ್ರೆಯನ್ನು ಸ್ವಾಗತಿಸಲಾಯಿತು.

ರಥಯಾತ್ರೆ ಸ್ವಾಗತ ಸಮಿತಿ ನೇತೃತ್ವದಲ್ಲಿ ರಥದಲ್ಲಿರುವ ನಂದಿಗೆ ಆರತಿ ಬೆಳಗಿ, ಪುಷ್ಪಾರ್ಚನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ ಶೇಣವ, ದೇಸಿ ತಳಿಯ ಗೋವುಗಳನ್ನು ಉಳಿಸುವ ದೃಷ್ಟಿಯಿಂದ ಹಮ್ಮಿಕೊಂಡಿರುವ ನಂದಿ ರಥಯಾತ್ರೆ ಇಡೀ ರಾಜ್ಯಾದ್ಯಂತ ಸಂಚರಿಸಿ ಮಂಗಳೂರಿಗೆ ಆಗಮಿಸಿದೆ. ಮುಂದಿನ 9 ದಿನಗಳ ಕಾಲ ಮಂಗಳೂರಿನ ವಿವಿಧ ದೇವಸ್ಥಾನ, ಮಠ, ಸಂಘ- ಸಂಸ್ಥೆಗಳಿಗೆ ಭೇಟಿ

ನೀಡಲಿದೆ. ಈ ವೇಳೆ ನಂದಿ ಪೂಜೆ, ಗವ್ಯ ಉತ್ಪನ್ನಗಳ ಖರೀದಿಗೆ ಅವಕಾಶವಿದೆ ಎಂದರು.ಏ.5ರಂದು ಸಂಜೆ 5.30ಕ್ಕೆ ನಗರದ ಕದ್ರಿ ಮೈದಾನದಲ್ಲಿ ರಥಯಾತ್ರೆಯ ಸಮಾರೋಪ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಕದ್ರಿ ಮೈದಾನದವರೆಗೆ ಶೋಭಾಯಾತ್ರೆ ಆಯೋಜಿಸಲಾಗಿದೆ. 108 ಭಜನಾ ತಂಡಗಳಿಂದ ಭಜನೆ, ವಿಷ್ಣುಸಹಸ್ರನಾಮ ಪಠಣ, ದೇಸಿ ಗೋವು, ನಂದಿ ತಳಿಯ ಪ್ರದರ್ಶನ ಮತ್ತು ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಗೋಸಂತತಿ ಉಳಿಸುವ ನಿಟ್ಟಿನಲ್ಲಿ 95 ದಿನಗಳ ಕಾಲ ರಾಜ್ಯಾದ್ಯಂತ ನಂದಿ ರಥಯಾತ್ರೆ ನಡೆಸಲಾಗುತ್ತಿದೆ ಎಂದರು.

ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್‌ನ ಭಕ್ತಿಭೂಷಣ್ ದಾಸ್, ಸ್ವಾಗತ ಸಮಿತಿ ಕೋಶಾಧಿಕಾರಿ ತಾರಾನಾಥ ಕೊಟ್ಟಾರಿ, ಸಹ ಕೋಶಾಧಿಕಾರಿ ವಿನಯ್‌ಕುಮಾರ್ ಕಡೆಗೋಳಿ, ಪ್ರಚಾರ ಸಮಿತಿಯ ಗೋಪಾಲ್ ಕುತ್ತಾರ್, ಶಕೀಲಾ ಕಾವ, ಅನಿಲ್ ಪಂಡಿತ್ ಬ್ರಹ್ಮರಕೂಟ್ಲು, ಅಶ್ವಿತ್ ಕೊಟ್ಟಾರಿ, ಮಾಜಿ ಕಾರ್ಪೋರೇಟರ್ ಸಂದೀಪ್ ಗರೋಡಿ, ವಿಹಿಂಪ ಪ್ರಮುಖ ಜಯಂತ್ ಕೋಟ್ಯಾನ್ ಇದ್ದರು.