ಅಪರಾಧ ಹೆಚ್ಚುತ್ತಿದ್ದರೂ ಕೈಕಟ್ಟಿ ಕುಳಿತ ಖಾಕಿ?

| Published : Jul 27 2024, 12:50 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ನಂದಿ ಗಿರಿಧಾಮ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ಕುಖ್ಯಾತ ಅಪರಾಧಿಗಳು, ಅಪಹರಣಕಾರರು (ಕಿಡ್ನಾಪರ್ಸ್)​ ತಮ್ಮ ತವರನ್ನಾಗಿ ಮಾಡಿಕೊಂಡಂತೆ ಕಂಡು ಬಂದಿದೆ. ಉದಾಹರಣೆ ಎಂಬಂತೆ ಇತ್ತೀಚೆಗೆ ಇದೇ ನಂದಿ ಗಿರಿಧಾಮ ಪೊಲೀಸ್ ಠಾಣೆಯ ಎದುರುಗಡೆ ಇರುವ ಲೋಕೇಶ್ ಹೋಟೆಲ್ ಹತ್ತಿರ ಸೀರೆ ಮಹಿಳಾ ಉದ್ಯಮಿ, ಸೀರೆ ಖರೀದಿ ಮಾಡಲು ವಿಜಯಪುರಕ್ಕೆ ಹೋಗುತ್ತಿದ್ದಾಗ, ಮಹಿಳಾ ಉದ್ಯಮಿಯ ಅಪಹರಣ ಮಾಡಿ, ಠಾಣೆಯ ಬಳಿ ಇರುವ ಎನ್‌ಎಚ್-44ರಲ್ಲಿ 5 ಲಕ್ಷಕ್ಕೂ ಹೆಚ್ಚು ಹಣ ಕಿತ್ತುಕೊಂಡು, ಚಿತ್ರಹಿಂಸೆ ನೀಡಿ ಬಿಟ್ಟು ಕಳುಹಿಸಲಾಗಿತ್ತು. ಆಗ ಕೆಲವು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರ ಹಿತರಕ್ಷಣೆಗೆಂದು ರಾಜ್ಯ ಸರ್ಕಾರ ದಶಕದ ಹಿಂದೆ ಚಿಕ್ಕಬಳ್ಳಾಪುರ ಗ್ರಾಮಾಂತರ ವ್ಯಾಪ್ತಿಯಲ್ಲಿದ್ದ ನಂದಿ ಗಿರಿಧಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿ ನೂತನವಾಗಿ ನಂದಿಗಿರಿಧಾಮ ಪೊಲೀಸ್ ಠಾಣೆಯನ್ನು ಮೊದಲು ನಿರ್ಮಾಣ ಮಾಡಿ, ನಂತರ ಠಾಣೆ ನಿರ್ಮಿಸಿದ್ದ ಜಾಗದ ತೊಡಕಿನಿಂದ ಅಲ್ಲಿದ್ದ ಠಾಣೆಯನ್ನು ರಾಷ್ಟ್ರೀಯ ಹೆದ್ದಾರಿ 44 ರ ಚದುಲಪುರದ ರೇಷ್ಮೇ ಬಿತ್ತನೆ ಕೋಠಿಯ ವಸತಿ ಗೃಹದಲ್ಲಿ ಆರಂಭಿಸಿ, ಇಂದಿಗೂ ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಈ ಠಾಣೆಗೆ ಕಾನೂನು ಸುವ್ಯವಸ್ಥೆ ವಿಭಾಗ ಮತ್ತು ಅಪರಾಧ ವಿಭಾಗಗಳಿಗೆ ಎಂದು ಇಬ್ಬಿಬ್ಬರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ನೇಮಕ ಮಾಡಿ, ಅವರಿಗೆ ಬೇಕಾದ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ.

ಆದರೂ, ಇತ್ತೀಚಿನ ದಿನಗಳಲ್ಲಿ ನಂದಿ ಗಿರಿಧಾಮ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ಕುಖ್ಯಾತ ಅಪರಾಧಿಗಳು, ಅಪಹರಣಕಾರರು (ಕಿಡ್ನಾಪರ್ಸ್)​ ತಮ್ಮ ತವರನ್ನಾಗಿ ಮಾಡಿಕೊಂಡಂತೆ ಕಂಡು ಬಂದಿದೆ. ಉದಾಹರಣೆ ಎಂಬಂತೆ ಇತ್ತೀಚೆಗೆ ಇದೇ ನಂದಿ ಗಿರಿಧಾಮ ಪೊಲೀಸ್ ಠಾಣೆಯ ಎದುರುಗಡೆ ಇರುವ ಲೋಕೇಶ್ ಹೋಟೆಲ್ ಹತ್ತಿರ ಸೀರೆ ಮಹಿಳಾ ಉದ್ಯಮಿ, ಸೀರೆ ಖರೀದಿ ಮಾಡಲು ವಿಜಯಪುರಕ್ಕೆ ಹೋಗುತ್ತಿದ್ದಾಗ, ಮಹಿಳಾ ಉದ್ಯಮಿಯ ಅಪಹರಣ ಮಾಡಿ, ಠಾಣೆಯ ಬಳಿ ಇರುವ ಎನ್‌ಎಚ್-44ರಲ್ಲಿ 5 ಲಕ್ಷಕ್ಕೂ ಹೆಚ್ಚು ಹಣ ಕಿತ್ತುಕೊಂಡು, ಚಿತ್ರಹಿಂಸೆ ನೀಡಿ ಬಿಟ್ಟು ಕಳುಹಿಸಲಾಗಿತ್ತು. ಆಗ ಕೆಲವು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಕಳೆದ ಕೆಲ ತಿಂಗಳುಗಳ ಹಿಂದೆ ಇದೇ ನಂದಿ ಗಿರಿಧಾಮ ಪೊಲೀಸ್‌ ಠಾಣೆ ವ್ಯಾಪ್ತಿಯ ನಂದಿ ಗಿರಿಧಾಮದ ರಸ್ತೆಯಲ್ಲಿರುವ ಕ್ಯೂವಿಸಿ ವಿಲ್ಲಾದಲ್ಲಿ ಹೈದರಾಬಾದ್ ಮೂಲದ ಟೆಕ್ಕಿಯನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಿ ಆತನಿಂದ ಐಪೋನ್, ಲ್ಯಾಪ್‌ಟಾಪ್, ಬೆಲೆ ಬಾಳುವ ವಾಚ್ ಕಿತ್ತುಕೊಂಡು ಆನ್‌ಲೈನ್ ಬ್ಯಾಂಕಿಂಗ್ ಆ್ಯಪ್‌ಗಳ ಮೂಲಕ ಸುಮಾರು 18 ಲಕ್ಷ ರು.ಗಳಿಗೂ ಹೆಚ್ಚು ಹಣ ದರೋಡೆ ಮಾಡಲಾಗಿತ್ತು. ಈ ಕುರಿತು ಟೆಕ್ಕಿ ದೂರು ನೀಡಿದ್ದರು. ಆದರೆ ಈ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಯಲಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು.

ಕೆಲವು ತಿಂಗಳ ಹಿಂದೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಸ್ವಿಫ್ಟ್ ಕಾರಿನಲ್ಲಿ ಇಬ್ಬರು ಸ್ನೇಹಿತರು ತಮ್ಮ ಪ್ರಯಾಣದ ವೇಳೆ ಕಾರನ್ನು ನಂದಿ ಗಿರಿಧಾಮ ಪೊಲೀಸ್ ಠಾಣೆಯ ಎದುರುಗಡೆ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ರಸ್ತೆ ಬದಿ ನಿಲ್ಲಿಸಿ ನಿದ್ದೆ ಹೋಗಿದ್ದರು. ಆಗ ಮಾರಕಾಸ್ತ್ರಗಳನ್ನು ಹಿಡಿದುಬಂದ 4 ಜನರ ದುಷ್ಕರ್ಮಿಗಳ ತಂಡ, ಕೊಲೆ ಬೆದರಿಕೆ ಹಾಕಿ ಅವರ ಬಳಿ ಇದ್ದ ಪೋನ್, ಕತ್ತಿನಲ್ಲಿದ್ದ ಚಿನ್ನದ ಸರ, ಬೆರಳಿನಲ್ಲಿದ್ದ ಉಂಗುರ ಹಾಗೂ 60 ಸಾವಿರ ರು. ಹಣ ದರೋಡೆ ಮಾಡಿದ್ದರು.

ಜಿಲ್ಲೆಯಲ್ಲಿ ಕಂಡುಕೇಳರಿಯದ ದರೋಡೆ, ಅಪಹರಣ, ಕಳ್ಳತನ ಪ್ರಕರಣಗಳು ನಂದಿ ಗಿರಿಧಾಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೇ ನಡೆಯುತ್ತಿವೆ ಎನ್ನುವ ಆರೋಪ ಹಾಗೂ ದೂರುಗಳು ಪದೇ ಪದೇ ಕೇಳಿ ಬರುತ್ತಿವೆ. ಇನ್ನು ಮುಂದಾದರೂ ಹಿರಿಯ ಪೊಲೀಸ್ ಅಧಿಕಾರಿಗಳು ನಂದಿಗಿರಿಧಾಮ ಪೊಲೀಸ್‌ ಠಾಣೆಯತ್ತ ತಮ್ಮ ಚಿತ್ತ ಹರಿಸಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುತ್ತಾರಾ ಎಂದು ಕಾದು ನೋಡಬೇಕು.

ಉದ್ಯಮಿ ಕಿಡ್ನಾಪ್ ಮಾಡಿ 60 ಲಕ್ಷ ರು.ವಸೂಲಿ:

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದ ಬಳಿಯಲ್ಲಿರುವ ಕುಡುವತಿ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ರಾಜಕಾರಣಿ ಕೆ.ಆರ್.ನವೀನ್ ತನ್ನ ಒಡೆತನದ ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಸಾಗರಹಳ್ಳಿ ಬಳಿಯ ತೋಟದ ಮನೆಯ ಬಳಿ ಜು.20 ರಂದು ಬೆಳಗ್ಗೆ 7.30ರ ಸಮಯದಲ್ಲಿ ಎಂದಿನಂತೆ ವಾಯು ವಿಹಾರ (ವಾಕಿಂಗ್) ಮಾಡುತ್ತಿದ್ದಾಗ, 4 ಜನ ದುಷ್ಕರ್ಮಿಗಳು ಹಣೆಗೆ ಗನ್ ಇಟ್ಟು ಕೊಲೆ ಬೆದರಿಕೆ ಹಾಕಿ, ಕಣ್ಣಿಗೆ ಬಟ್ಟೆ ಕಟ್ಟಿಅಪಹರಣ ಮಾಡಿ, ಚಿತ್ರಹಿಂಸೆ ನೀಡಿ 60 ಲಕ್ಷ ರು. ಹಣ ವಸೂಲಿ ಮಾಡಿರುವುದಾಗಿದೆ.6 ಜನ ಅಪಹರಣಕಾರರು ಸಿಲ್ವರ್ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ನವೀನ್‌ನನ್ನು ಕೂಡಿ ಹಾಕಿಕೊಂಡು ದಿನಕ್ಕೊಂದು ಏರಿಯಾದಿಂದ ಏರಿಯಾಗೆ ಸಾಗಿಸಿಕೊಂಡು ವಿಕೃತ ಚಿತ್ರಹಿಂಸೆ ನೀಡುತ್ತಾ, ನವೀನ್ ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥ ಉದ್ಯಮಿಗಳಿಂದ 60 ಲಕ್ಷ ರುಪಾಯಿ ವಸೂಲಿ ಮಾಡಿದ್ದಾರೆ. ನಂತರ ನಂದಿ ಗಿರಿಧಾಮ ಪೊಲೀಸ್ ಠಾಣೆ ಎದುರು ಇರುವ ಎಲ್‌ ಜಿ ಲೇ ಔಟ್‌ನಲ್ಲಿ ಬಿಟ್ಟು ಪರಾರಿಯಾಗಿದ್ದು, ಈ ಕುರಿತು ನಂದಿ ಗಿರಿಧಾಮ ಠಾಣೆ ಪೊಲೀಸರು ಭಾರತೀಯ ನ್ಯಾಯಸಂಹಿತೆ 140(2) 190 ಹಾಗೂ 25 ಸಶಸ್ತ್ರ ನಿಷೇಧ ಕಾಯ್ದೆಯಡಿ ದೂರು ದಾಖಲು ಮಾಡಿಕೊಂಡಿದ್ದಾರೆ.