ಸಾರಾಂಶ
ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ತೆರೆಯುವ ಪ್ರಶ್ನಿಗೆ ಉತ್ತರಿಸಿದ ಅವರು, ನಾವು ಈಗಾಗಲೇ ಈ ವಿಚಾರವಾಗಿ ಅರ್ಜಿ ಸಲ್ಲಿಸಿದ್ದು, ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರೀಶಿಲನೆ ನಡೆಸಲಾಗುತ್ತಿದ್ದು, ಇದಾದ ನಂತರ ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ತಿಳಿಸಿದರು.ತಾಲೂಕಿನ ಬೈರಾಪಟ್ಟಣದ ಬಳಿ ಇರುವ ಬಮೂಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಚನ್ನಪಟ್ಟಣ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಗಳ ಸಮಾಲೋಚನೆ ಸಭೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ತೆರೆಯುವ ಪ್ರಶ್ನಿಗೆ ಉತ್ತರಿಸಿದ ಅವರು, ನಾವು ಈಗಾಗಲೇ ಈ ವಿಚಾರವಾಗಿ ಅರ್ಜಿ ಸಲ್ಲಿಸಿದ್ದು, ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ಇದಾದ ನಂತರ ನಮಗೂ ಮೆಟ್ರೋ ಸಂಸ್ಥೆ ನಡುವೆ ಒಪ್ಪಂದ ಆಗಬೇಕಿದೆ. ಹೊರರಾಜ್ಯದ ಸಂಸ್ಥೆಗಳು ಹೆಚ್ಚಿನ ಬಾಡಿಗೆ ನೀಡುವ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಹೀಗಾಗಿ ಮೆಟ್ರೋದವರು ನಮ್ಮಿಂದಲೂ ಹೆಚ್ಚಿನ ಬಾಡಿಗೆ ನಿರೀಕ್ಷೆ ಮಾಡುತ್ತಾರೆ. ಇದು ರೈತರ ಸಂಸ್ಥೆಯಾಗಿರುವುದರಿಂದ ಕಡಿಮೆ ಬಾಡಿಗೆ ನೀಡಬೇಕು ಎಂದು ಉಪಮುಖ್ಯಮಂತ್ರಿಗಳು ಹಾಗೂ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇನೆ. ಸ್ಥಳ ಪರಿಶೀಲನೆ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.ಪರಿಸರಸ್ನೇಹಿ ಹಾಲಿನ ಪ್ಯಾಕೆಟ್: ನಮ್ಮ ಮಾರುಕಟ್ಟೆ ವ್ಯಾಪ್ತಿಯ ಜಯನಗರ, ಬಿಟಿಎಂ ಲೇಔಟ್ ಸೇರಿದಂತೆ ಯಾವ ಸ್ಥಳ ಸೂಕ್ತ ಎಂಬುದನ್ನು ಮಾರುಕಟ್ಟೆ ಅಧಿಕಾರಿಗಳು ಸೂಕ್ತ ಪರಿಶೀಲನೆ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ಬೆಂಗಳೂರಿನ ಮಾರುಕಟ್ಟೆಗೆ ಪ್ರಾಯೋಗಿಕವಾಗಿ ಬಿಡುಗಡೆ ಮಾಡುತ್ತೇವೆ ಎಂದರು.ಶಾಸಕರ ಸಭೆ ಸಿಎಂ ಪರಮೋಚ್ಛ ಅಧಿಕಾರ: ಡಿಸಿಎಂ ಹೊರಗಿಟ್ಟು ಸಿಎಂ ಶಾಸಕರ ಸಭೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ಆ ರೀತಿ ಏನಿಲ್ಲ. ಶಾಸಕರ ಸಭೆ ಮಾಡಲು ಮುಖ್ಯಮಂತ್ರಿಗಳಿಗೆ ಪರಮೋಚ್ಛ ಅಧಿಕಾರವಿದೆ. ಶಾಸಕರ ಸಮಸ್ಯೆ ಆಲಿಸುವುದು ಮೊದಲಿನಿಂದಲೂ ನಡೆಸಿಕೊಂಡು ಬರಲಾಗಿದೆ. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶಾಸಕರ ಅಹವಾಲು ಸ್ವೀಕರಿಸುತ್ತಿದ್ದಾರೆ. ಇದು ನಿರಂತರ ಪ್ರಕ್ರಿಯೆ ಎಂದರು.ಯೂರಿಯಾ ಉತ್ಪಾದನೆ, ಪೂರೈಕೆ ಕೇಂದ್ರದ ಜವಾಬ್ದಾರಿ:
ಯೂರಿಯಾ ಉತ್ಪಾದನೆ ಮಾಡುವುದು ರಾಜ್ಯ ಸರ್ಕಾರವಲ್ಲ, ಯೂರಿಯಾವನ್ನು ಬಿಡುಗಡೆ ಮಾಡಬೇಕಿರುವುದೂ ಕೇಂದ್ರ ಸರ್ಕಾರವೇ. ಕೇಂದ್ರ ಇದರ ಜವಾಬ್ದಾರಿ ಹೊತ್ತಿದ್ದು, ಅವರು ರಾಜ್ಯ ಸರ್ಕಾರ ಮೇಲೆ ಆರೋಪ ಹಾಕುವ ಬದಲು ತಮ್ಮ ಜವಾಬ್ದಾರಿ ತೆಗೆದುಕೊಂಡು ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸುವುದು ಕೇಂದ್ರದ ಸಚಿವರು ಹಾಗೂ ಸಂಸದರ ಕರ್ತವ್ಯ. ಕೇಂದ್ರ ಸಚಿವರಿಗೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದು, ಸಂಸತ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸಚಿವರು ದೆಹಲಿಯಲ್ಲಿ ಸಿಗುತ್ತಾರೆ. ಹೀಗಾಗಿ ಸಂಸದರುಗಳು ಅವರ ಜೊತೆ ಸಭೆ ಮಾಡಿ ಆದಷ್ಟು ಬೇಗ ಬೇಡಿಕೆ ಇರುವ ಕಡೆಗಳಲ್ಲಿ ಇದನ್ನು ಸರಬರಾಜು ಮಾಡಬೇಕು ಎಂದು ತಿಳಿಸಿದರು.ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ರಾಹುಲ್ ಗಾಂಧಿ ಅವರ ಹೇಳಿಕೆ ವಿಚಾರಕ್ಕೆ, ಈ ವಿಚಾರವಾಗಿ ರಾಹುಲ್ ಗಾಂಧಿ ಅವರೇ ಎಲ್ಲಾ ವಿಚಾರ ಹೇಳಿದ್ದು, ನಾನು ಅವರ ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತೇನೆ. ಉಳಿದಂತೆ ನಾನು ಹೇಳುವುದೇನಿದೆ ಎಂದರು.
ಆ. 4ರಂದು ನಡೆಯಲಿರುವ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಅಗತ್ಯವಾದ ವಿಚಾರಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಇಂದು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.