ನಂದಿನಿ ಹಾಲು ದರ ಏರಿಕೆ ಹುಚ್ಚುತನ ಪರಮಾವಧಿ

| Published : Jul 02 2024, 01:39 AM IST

ಸಾರಾಂಶ

ನಂದಿನಿ ಹಾಲಿನ ದರ ಏರಿಕೆ ಖಂಡಿಸಿ ಹಸು ಹಾಗೂ ಹಾಲಿನ ಖಾಲಿ ಕ್ಯಾನ್‌ ಸಮೇತ ಬಿಜೆಪಿ ಜಿಲ್ಲಾ ರೈತ ಮೋರ್ಚಾದಿಂದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

- ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ ನೇತೃತ್ವದಲ್ಲಿ ಜಿಲ್ಲಾ ರೈತ ಮೋರ್ಚಾ ಹೋರಾಟ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನಂದಿನಿ ಹಾಲಿನ ದರ ಏರಿಕೆ ಖಂಡಿಸಿ ಹಸು ಹಾಗೂ ಹಾಲಿನ ಖಾಲಿ ಕ್ಯಾನ್‌ ಸಮೇತ ಬಿಜೆಪಿ ಜಿಲ್ಲಾ ರೈತ ಮೋರ್ಚಾದಿಂದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಶ್ರೀ ಜಯದೇವ ವೃತ್ತದಿಂದ ಗಾಂಧಿ ವೃತ್ತ ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿವರೆಗೆ ನಂದಿನಿ ಹಾಲಿನ ದರ ಏರಿಕೆ ಖಂಡಿಸಿ ಘೋಷಣೆಗಳನ್ನು ಕೂಗಿದರು. ಅನಂತರ ಉಪವಿಭಾಗಾಧಿಕಾರಿ ಕಚೇರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಎಸ್‌.ಎ. ರವೀಂದ್ರನಾಥ ಮಾತನಾಡಿ, ರಾಜ್ಯದಲ್ಲಿ ಹಾಲಿನ ಉತ್ಪಾದನೆ ನಿತ್ಯವೂ 1 ಕೋಟಿ ಲೀಟರ್ ಸನಿಹದಲ್ಲಿದೆ ಎಂಬ ಕಾರಣಕ್ಕಾಗಿ ಹಾಲಿನ ದರ ಹೆಚ್ಚಿಸಿರುವುದು ಹಾಸ್ಯಾಸ್ಪದ ಸಂಗತಿ. ಯಾವುದೇ ಉತ್ಪನ್ನಗಳ ಅಭಾವ ತಲೆದೋರಿದಾಗ ಬೆಲೆ ಏರಿಕೆ ಸಾಮಾನ್ಯ. ಆದರೆ, ಉತ್ಪನ್ನ ಅಧಿಕವಾಗಿದ್ದಾಗಲೂ ಅದರ ದರ ಹೆಚ್ಚಿಸಿರುವುದು ಕಾಂಗ್ರೆಸ್ ಸರ್ಕಾರದ ಹುಚ್ಚುತನದ ಪರಮಾವಧಿಯಾಗಿದೆ ಎಂದರು.

ಜನರಿಗೆ ಸರ್ಕಾರ ಬರೆ:

ಮಕ್ಕಳಿಂದ ವೃದ್ಧರವರೆಗೆ ಪ್ರತಿಯೊಬ್ಬರಿಗೂ ಹಾಲು ಅಗತ್ಯವಾಗಿ ಬೇಕಾಗಿದೆ. ಪೋಷಕಾಂಶಗಳ ಆಗರವಾದ ಹಾಲು ಅಮೃತದ ಸಮಾನ. ಆದರೆ, ರಾಜ್ಯ ಸರ್ಕಾರ ಹಾಲಿನ ವಿಚಾರದಲ್ಲಿ ಹುಚ್ಚುಹುಚ್ಚಾಗಿ ನಿರ್ವಹಣೆ ಮಾಡುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಾಗಿದ್ದರಿಂದ 1 ಲೀಟರ್ ಪ್ಯಾಕೆಟ್‌ನಲ್ಲಿ 100 ಎಂಎಲ್‌ ಹೆಚ್ಚಿಸಿ, ಹಳೆ ದರಕ್ಕೆ ಮಾರಾಟ ಮಾಡಿದ್ದರೆ ಅದನ್ನು ಕ್ಷೀರಭಾಗ್ಯ ಎಂದು ಜನಪರ ನಿರ್ಧಾರ ಎನ್ನಬಹುದಿತ್ತು. ಆದರೆ, ಹಾಲಿನ ಬೆಲೆ ಹೆಚ್ಚಿಸಿ, ಸರ್ಕಾರ ಜನರಿಗೆ ಬರೆ ಹಾಕಿದೆ ಎಂದು ದೂರಿದರು.

ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಹಾಲಿನ ದರ ಏರಿಕೆ ಹಿಂಪಡೆದು, 1 ಲೀಟರ್ ಪಾಕೆಟ್‌ನಲ್ಲಿ 100 ಎಂಎಲ್ ಹೆಚ್ಚಿಸಿ, ಹಳೆ ದರಕ್ಕೆ ಮಾರಾಟ ಮಾಡಬೇಕು. ರಾಜ್ಯದ 15 ಹಾಲು ಒಕ್ಕೂಟದಲ್ಲಿ 798691 ಹಾಲು ಉತ್ಪಾದಕ ರೈತರಿದ್ದಾರೆ. ಆಗಸ್ಟ್ 2023ರಿಂದ ಮಾರ್ಚ್ 2024 ರವರೆಗೆ 8 ತಿಂಗಳ ₹1083 ಕೋಟಿ ಪ್ರೋತ್ಸಾಹಧನ ಬಾಕಿ ಇದೆ. ಆದರೆ, ಏಪ್ರಿಲ್ 2024ನೇ ತಿಂಗಳ ₹109 ಕೋಟಿ ಬಿಡುಗಡೆ ಮಾಡಿದ ಸರ್ಕಾರ ಉಳಿದ ಹಣವನ್ನೂ ತಕ್ಷಣ ನೀಡಲಿ. ಹೀಗೆ ಪ್ರೋತ್ಸಾಹಧನ ಉಳಿಸಿಕೊಂಡರೆ, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆಂಬ ಅರಿವು ಆಳುವವರಿಗೆ ಇಲ್ಲವೇ ಎಂದು ಪ್ರಶ್ನಿಸಿದರು.

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ರೈತರು ಜಮೀನು ಉಳುಮೆ ಮಾಡಿಕೊಂಡು ಬಿತ್ತನೆಗೆ ಅಣಿಯಾದಾಗ ಬಿತ್ತನೆಬೀಜಗಳ ದರ ಹೆಚ್ಚಿಸಲಾಗಿದೆ. ಬಿಜೆಪಿ ಯಾಂತ್ರೀಕೃತ ಕೃಷಿಗೆ ಪ್ರೋತ್ಸಾಹಿಸಲು ರೈತಶಕ್ತಿ ಯೋಜನೆಯನ್ನು ಜಾರಿಗೊಳಿಸಿತ್ತು. ಅದನ್ನು ಸಿದ್ದರಾಮಯ್ಯ ಸರ್ಕಾರ ಸ್ಥಗಿತಗೊಳಿಸಿದೆ ಎಂದರು.

ಪಕ್ಷದ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿದರು. ಪಕ್ಷದ ಜಿಲ್ಲಾದ್ಯಕ್ಷ ಎನ್.ರಾಜಶೇಖರ ನಾಗಪ್ಪ, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಯಶವಂತ ರಾವ್ ಜಾಧವ್‌, ಧನಂಜಯ ಕಡ್ಲೇಬಾಳು, ಐರಣಿ ಅಣ್ಣೇಶ, ಶಿವನಗೌಡ ಪಾಟೀಲ, ಚಂದ್ರಶೇಖರ ಪೂಜಾರ, ಪಿ.ಸಿ. ಶ್ರೀನಿವಾಸ ಭಟ್, ಸಂಗನಗೌಡ, ಜಿ.ಎಸ್.ಶ್ಯಾಮ ಮಾಯಕೊಂಡ, ಕಲ್ಲೇಶ, ಬಾತಿ ಶಿವಕುಮಾರ, ಅಣಜಿ ಗುಡ್ಡೇಶ, ಅತಿಥ್ ಅಂಬರಕರ್, ರಮೇಶ ನಾಯ್ಕ, ಶಂಕರಗೌಡ ಬಿರಾದಾರ, ಕಬ್ಬೂರು ಶಿವಕುಮಾರ, ಡಾ.ನಸೀರ ಅಹಮ್ಮದ ಇತರರು ಇದ್ದರು.

- - -

ಟಾಪ್ ಕೋಟ್‌

ಭೂ ಸಿರಿ ಯೋಜನೆ, ರೈತ ವಿದ್ಯಾನಿಧಿ ಯೋಜನೆ ನಿಲ್ಲಿಸಲಾಗಿದೆ. ಮುದ್ರಾಂಕ ದರ ಏರಿಕೆ, ಆಸ್ತಿ ನೋಂದಣಿ ಶೇ.30 ಹೆಚ್ಚಳವಾಗಿದೆ. ಕ್ಷೀರ ಸಮೃದ್ಧಿ ಬ್ಯಾಂಕ್ ಯಾಕೆ ಪ್ರಾರಂಭಿಸಿಲ್ಲ? ರಾಜ್ಯದಲ್ಲಿ 824 ರೈತರ ಆತ್ಮಹತ್ಯೆಗೆ ಕಾರಣವೇನು? ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ

- ಎನ್.ರಾಜಶೇಖರ ನಾಗಪ್ಪ, ಜಿಲ್ಲಾಧ್ಯಕ್ಷ, ಬಿಜೆಪಿ

- - -

-1ಕೆಡಿವಿಜಿ1, 2, 3:

ಹಾಲಿನ ದರ ಏರಿಸಿದ್ದನ್ನು ಹಿಂಪಡೆಯಲು ಒತ್ತಾಯಿಸಿ ಹಸು ಹಾಗು ಖಾಲಿ ಹಾಲಿನ ಖಾಲಿ ಕ್ಯಾನ್ ಸಮೇತ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ ನಡೆಯಿತು.