ಸಾರಾಂಶ
ಹಾವೇರಿ: ಹಾವೇರಿ ಹಾಲು ಉತ್ಪಾದಕರ ಸಂಘ (ಹಾವೇಮುಲ್) ತಾಲೂಕಿನ ಜಂಗಮನಕೊಪ್ಪ ಗ್ರಾಮದಲ್ಲಿರುವ ಯು.ಎಚ್.ಟಿ ಹಾಲು ಪ್ಯಾಕಿಂಗ್ ಹಾಗೂ ಸಂಸ್ಕರಣಾ ಸ್ಥಾವರದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಂದಿನಿ ಸಮೃದ್ಧಿ ಹಾಲಿನ ಪ್ಯಾಕೆಟ್ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ಹಾವೇಮುಲ್ ಅಧ್ಯಕ್ಷ ಬಸವರಾಜ ಅರಬಗೊಂಡ ಮಾತನಾಡಿ, ನಂದಿನಿ ಸಮೃದ್ಧಿ ಹಾಲು ಅತಿ ಗಟ್ಟಿ ಮತ್ತು ತಾಜಾತನದಿಂದ ಕೂಡಿದೆ. ಹೋಟೆಲ್ ಉದ್ಯಮಿಗಳಿಗೆ ಬಹು ಉಪಕಾರಿಯಾಗಿದೆ. ಹಾಲಿನ ಗುಣಮಟ್ಟ ಹಾಗೂ ಮೂಲ ಸೌಕರ್ಯಗಳ ಸದ್ಬಳಕೆಯಿಂದ ಹಾವೇರಿ ಹಾಲು ಒಕ್ಕೂಟ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಇದೀಗ ಸಮೃದ್ಧಿ ಹಾಲು ಕೂಡ ಸೇರ್ಪಡೆಯಾಗಿದೆ. ರೈತರು, ಗ್ರಾಹಕರು, ಮಾರಾಟಗಾರರು, ಸರಬರಾಜುದಾರರು, ಆಡಳಿತ ಮಂಡಳಿಯವರು ಎಲ್ಲರೂ ಒಗ್ಗಟ್ಟಾಗಿ ಶ್ರಮ ಹಾಕಿದ್ದಾಗ ಮಾತ್ರ ಯಶಸ್ವಿ ಗುರಿ ಸಾಧಿಲು ಸಾಧ್ಯವಾಗುತ್ತದೆ ಎಂದರು.ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ ಶೆಟ್ಟಿ ಮಾತನಾಡಿ, ಹೋಟೆಲ್ ಉದ್ಯಮ ಹಾಗೂ ನಂದಿನಿ ಹಾಲಿನ ಉತ್ಪನ್ನಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಾವೇಮುಲ್ ವತಿಯಿಂದ ಸಮೃದ್ಧಿ ಹಾಲು ಎಂಬ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದ್ದು, ವಿವಿಧ ಹೋಟೆಲ್ ಉದ್ಯಮಿಗಳು, ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು. ಹೈನುಗಾರರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬೆಂಬಲಿಸುತ್ತೇವೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ಬಸನಗೌಡ ಮೇಲಿನಮನಿ, ಹಾಲು ಒಕ್ಕೂಟದ ನಿರ್ದೇಶಕ ಚಂದ್ರಪ್ಪ ಜಾಲಗಾರ ಮಾತನಾಡಿದರು. ಹಾವೇಮೂಲ್ ವ್ಯವಸ್ಥಾಪಕ ನಿರ್ದೇಶಕ ಎಚ್.ಟಿ ಅಶೊಕಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ವಿವಿಧ ಉದ್ಯಮಿಗಳು ಪಾಲ್ಗೊಂಡಿದ್ದರು. ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ವೇದಮೂರ್ತಿ ಎಂ.ಆರ್ ನಿರೂಪಿಸಿ, ನಿರ್ವಹಿಸಿದರು.