ಏ. 9ಕ್ಕೆ ಶ್ರೀಕಂಠೇಶ್ವರ ದೇವಾಲಯದ ಪಂಚ ಮಹಾ ರಥೋತ್ಸವ

| Published : Feb 28 2025, 12:45 AM IST

ಏ. 9ಕ್ಕೆ ಶ್ರೀಕಂಠೇಶ್ವರ ದೇವಾಲಯದ ಪಂಚ ಮಹಾ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಏ. 9ರಂದು ನಡೆಯುವ ಪಂಚಾ ಮಹಾರಥೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸುವುದರಿಂದ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರುದಕ್ಷಿಣಕಾಶಿ ಖ್ಯಾತಿಯ ನಂಜನಗೂಡಿನಲ್ಲಿ ಏ. 9 ರಂದು ಶ್ರೀಕಂಠೇಶ್ವರ ದೇವಾಲಯದ ಪಂಚಾ ಮಹಾರಥೋತ್ಸವ ಹಾಗೂ ಏ. 11 ರಂದು ತೆಪ್ಪೋತ್ಸವ ನಡೆಯಲಿದ್ದು ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಸೂಚಿಸಿದರು.ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಲ್ಲಿ ಶ್ರೀಕಂಠೇಶ್ವರ ದೇವಾಲಯದ ಪಂಚ ಮಹಾ ರಥೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಏ. 9ರಂದು ನಡೆಯುವ ಪಂಚಾ ಮಹಾರಥೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸುವುದರಿಂದ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ತಾತ್ಕಾಲಿಕ ವಾಚ್ ಟವರ್ ನಿರ್ಮಿಸಬೇಕು. ಸುಗಮ ವಾಹನ ಸಂಚಾರಕ್ಕೆ ಬ್ಯಾರಿಕೆಡಿಂಗ್ ವ್ಯವಸ್ಥೆ ಹಾಗೂ ಮಾಹಿತಿ ಫಲಕ ಹಾಗೂ ಸ್ವಾಗತ ಕಮಾನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.ರಥೋತ್ಸವ ದಿನಾಂಕದಂದು ರಥಗಳು ಚಲಿಸುವ ರಸ್ತೆಯಲ್ಲಿ ಅಡ್ಡಲಾಗಿ ಇರುವ ವಿದ್ಯುತ್ ತಂತಿ ತೆಗೆದು, ರಥೋತ್ಸವ ಮುಗಿದ ನಂತರ ಪುನರ್ ಜೋಡಿಸಬೇಕು, ರಥೋತ್ಸವ ಮತ್ತು ತೆಪ್ಪೋತ್ಸವ ನಡೆಯುವ ದಿನಗಳಂದು ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು.ರಥೋತ್ಸವದ ಪೂರ್ವಭಾವಿಯಾಗಿ 5 ರಥಗಳನ್ನು ತಾಂತ್ರಿಕವಾಗಿ ಪರಿಶೀಲಿಸಿ ದುರಸ್ತಿ ಅಗತ್ಯವಿದ್ದಲ್ಲಿ ವರದಿ ನೀಡಬೇಕು ಹಾಗೂ ರಥ ಎಳೆಯಲು ಯೋಗ್ಯವಾಗಿರುವ ಬಗ್ಗೆ ದೃಢೀಕರಣ ನೀಡಬೇಕು. ರಥ ಚಲಿಸುವ ರಸ್ತೆಗಳಲ್ಲಿ ಹಳ್ಳ ದಿಣ್ಣೆಗಳು ಇದ್ದಲ್ಲಿ ಸಮತಟ್ಟು ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ರಥೋತ್ಸವ ಪ್ರಯುಕ್ತ ಲಕ್ಷಾಂತರ ಭಕ್ತಾದಿಗಳು ಆಗಮಿಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸುಸಜ್ಜಿತ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ತೆಪ್ಪೋತ್ಸವ ದಿನದಂದು ಕಪಿಲಾ ನದಿ ತೀರದಲ್ಲಿ ಭಕ್ತಾದಿಗಳ ಸುರಕ್ಷತಾ ದೃಷ್ಟಿಯಿಂದ ಮುಳುಗು ತಜ್ಞರೊಂದಿಗೆ ಬೋಟ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.ಸಭೆಯಲ್ಲಿ ನಗರಸಭಾ ಅಧ್ಯಕ್ಷ ಸ್ವಾಮಿ, ತಹಸೀಲ್ದಾರ್ ಶಿವಕುಮಾರ್ ಕಾಸನೂರು, ಇಒ ಜಗದೀಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶ್ರೀರಾಂಪುರ, ಶಂಕರಪುರ, ಗೋಳೂರು, ದೇವರಸನಹಳ್ಳಿ, ಗೀಕಳ್ಳಿ, ನಂಜನಗೂಡು ಕಸಬಾ ಮತ್ತು ಮುಳ್ಳೂರು ಗ್ರಾಮಗಳ ಮುಖ್ಯಸ್ಥರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

-- ಬಾಕ್ಸ್--

-- ಕರ್ತವ್ಯ ಲೋಪ ಮಾಡದಿರಿ--

ಎಡಿಸಿ ಡಾ.ಪಿ. ಶಿವರಾಜು ಮಾತನಾಡಿ, ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ವಾಹನಗಳ ನಿಲುಗಡೆಗೆ ಹಾಗೂ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ರಥೋತ್ಸವಕ್ಕೆ ಬರುವ ಜನಸಂಖ್ಯೆಯ ಬಗ್ಗೆ ಅರಿವು ಇರಬೇಕು. ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಮಾಡಬೇಕು. ಒಂದು ಇಲಾಖೆಯವರು ಇನ್ನೊಂದು ಇಲಾಖೆಯ ಮೇಲೆ ಹೇಳುವುದನ್ನು ಬಿಡಿ. ಎಲ್ಲರೂ ಒಟ್ಟುಗೂಡಿ ರಥೋತ್ಸವಕ್ಕೆ ಅದ್ಧೂರಿ ಸಿದ್ಧತೆ ಮಾಡಿಕೊಳ್ಳಿ. ಅಗತ್ಯವಾದ ಎಲ್ಲಾ ಸೌಲಭ್ಯವನ್ನು ಜಿಲ್ಲಾಡಳಿತ ವತಿಯಿಂದ ನೀಡಲಾಗುವುದು. ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.ರಥೋತ್ಸವ ದಿನದಂದು ಸಂಘ ಸಂಸ್ಥೆಗಳು ಉಚಿತವಾಗಿ ನೀಡುವ ಪ್ರಸಾದ ವಿತರಣೆಗೆ ಅನುಮತಿ ಪಡೆಯಬೇಕು. ಪ್ರಸಾದ ವಿತರಣೆಗೆ ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಭಕ್ತಾದಿಗಳ ಸೌಕರ್ಯಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು. ತಾತ್ಕಾಲಿಕ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.