ನಂಜು ನಿವಾರಕ ಅಮರಗೋಳ ನಾಗಸ್ವಾಮಿ ರಥೋತ್ಸವ ನಾಳೆ

| Published : Aug 08 2024, 01:33 AM IST

ಸಾರಾಂಶ

ಮನೆಯಲ್ಲಿ ವಿಷಜಂತುಗಳ ಹಾವಳಿ ಹೆಚ್ಚಾದರೆ ಇಲ್ಲಿಗೆ ಬಂದು ನಾಗದೋಷ ನಿವಾರಣೆಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಈ ದೇವಸ್ಥಾನಕ್ಕೆ ಬಂದು ಮಂತ್ರಿಸಿದ ಅಕ್ಕಿಕಾಳು ಒಯ್ದು ಮನೆ ಸುತ್ತಲು ಹಾಕಿದರೆ ವಿಷ ಜಂತುಗಳು ಮನೆ ಸುತ್ತ ಹಾಯುವುದಿಲ್ಲ ಎಂಬ ಪ್ರತೀತಿ.

ನವಲಗುಂದ:

ನಂಜು ನಿವಾರಕ ದೇವಸ್ಥಾನವೆಂದು ಖ್ಯಾತಿ ಪಡೆದಿರುವ ತಾಲೂಕಿನ ಅಮರಗೋಳ ಗ್ರಾಮದ ನಾಗಸ್ವಾಮಿ ಜಾತ್ರಾ ಮಹೋತ್ಸವ ಆ. 9ರಂದು ನಡೆಯಲಿದೆ. ಅಂದು ಸಂಜೆ 5.30ಕ್ಕೆ ನಡೆಯುವ ರಥೋತ್ಸವಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.

ಪ್ರತಿ ವರ್ಷ ನಾಗರ ಪಂಚಮಿ ಅಮವಾಸ್ಯೆಯಿಂದ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಆರಂಭವಾಗುತ್ತವೆ. ಈ ಬಾರಿ ಶುಕ್ರವಾರ ನಾಗರ ಪಂಚಮಿ ದಿನ ರಥೋತ್ಸವ ನಡೆಯಲಿದೆ. ಹೀಗಾಗಲೇ ವಿವಿಧ ಧಾರ್ಮಿಕ ಕಾರ್ಯಗಳು ಕ್ಷೇತ್ರದಲ್ಲಿ ನಡೆದಿದ್ದು ನಿತ್ಯವೂ ಸಾವಿರಾರು ಭಕ್ತರು ಆಗಮಿಸಿ ನಾಗಸ್ವಾಮಿ ದರ್ಶನ ಪಡೆದಿದ್ದಾರೆ.

ನಾಗದೋಷ ನಿವಾರಣೆಗೆ ಪೂಜೆ:

ಮನೆಯಲ್ಲಿ ವಿಷಜಂತುಗಳ ಹಾವಳಿ ಹೆಚ್ಚಾದರೆ ಇಲ್ಲಿಗೆ ಬಂದು ನಾಗದೋಷ ನಿವಾರಣೆಗೆ ಭಕ್ತರು ಪೂಜೆ ಸಲ್ಲಿಸುತ್ತಾರೆ. ಈ ದೇವಸ್ಥಾನಕ್ಕೆ ಬಂದು ಮಂತ್ರಿಸಿದ ಅಕ್ಕಿಕಾಳು ಒಯ್ದು ಮನೆ ಸುತ್ತಲು ಹಾಕಿದರೆ ವಿಷ ಜಂತುಗಳು ಮನೆ ಸುತ್ತ ಹಾಯುವುದಿಲ್ಲ ಎಂಬ ಪ್ರತೀತಿ ಇದೆ.

ಹಿನ್ನಲೆ:

ಮಹರಾಷ್ಟ್ರದ ಇಬ್ಬರು ಸಂತರು ಯಮನೂರು ಚಾಂಗದೇವರ ದರ್ಶನ ಪಡೆದು ಸಂಚರಿಸುತ್ತಾ ಅಮರಗೋಳಕ್ಕೆ ಬಂದು ಬೆಣ್ಣಿಹಳ್ಳ ಹಾಯ್ದು ಹೋಗುವ ಸ್ಥಳದಲ್ಲಿಯೇ ಆಶ್ರಮ ನಿರ್ಮಿಸಿಕೊಂಡು ಭಕ್ತರಿಗೆ ಆಧ್ಯಾತ್ಮಿಕ ಸಂದೇಶ ಹಾಗೂ ಪ್ರವಚನ ನೀಡುತ್ತಿದ್ದರು. ಅಮರಗೋಳ ಸುತ್ತ-ಮುತ್ತಲಿನ ನಾಗರಹಳ್ಳಿ, ಕಡದಳ್ಳಿ ಗ್ರಾಮಗಳು ಗಿಡ-ಕಂಟಿಗಳಿಂದ ತುಂಬಿ ವಿಷ ಜಂತುಗಳ ಆಶ್ರಯ ತಾಣವಾಗಿದ್ದವು. ಅವು ಜನರಿಗೆ ಕಚ್ಚಿದಾಗ ಸಂತರು ಬೆಣ್ಣಿಹಳ್ಳದ ನೀರಿಗೆ ತೀರ್ಥಸ್ವರೂಪ ನೀಡಿ ಭಕ್ತರ ಭಯ ನಿವಾರಿಸಿದ್ದಾರೆಂಬ ಪ್ರತೀತಿ ಇದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ನಾಗದೋಷ ಇರುವವರು ಮಠಕ್ಕೆ ಬಂದು ಪೂಜಿಸಿ ದೋಷದಿಂದ ಮುಕ್ತರಾಗುತ್ತಿದ್ದಾರೆ. ಸಂತರು ಆತ್ಮವನ್ನು ತ್ಯೇಜಿಸಿದ ನಂತರ ಇಬ್ಬರ ಸಮಾಧಿಯನ್ನು ಮಠದ ಹತ್ತಿರವೇ ನಿರ್ಮಿಸಲಾಗಿದೆ. ವಿಷ ಜಂತುಗಳಿಂದ ಬಾಧೆಗೊಳಗಾದವರು ಶ್ರೀಮಠಕ್ಕೆ ಬಂದರೆ ವಿಷದಿಂದ ಮುಕ್ತರಾಗುತ್ತಾರೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ.

ಇನ್ನು ಹಾವು ಸೇರಿದಂತೆ ವಿಷ ಜಂತುಗಳು ಕಡಿದರೆ ಆ ಜಾಗದಲ್ಲಿ ದೇವಸ್ಥಾನದ ವಿಭೂತಿ ಹಚ್ಚಿ ಪ್ರಸಾದವಾಗಿ ತೀರ್ಥ ಸೇವಿಸಲಾಗುತ್ತದೆ. ಇದರಿಂದ ವಿಷ ದೇಹದೊಳಕ್ಕೆ ಏರುವುದಿಲ್ಲ ಎಂಬ ನಂಬಿಕೆ ಇಲ್ಲಿನ ಜನತೆಯದ್ದು.