ನನ್ನಿವಾಳ ನ್ಯಾಯಬೆಲೆ ಅಂಗಡಿ ಪಡಿತರ ವಿತರಣೆ ವಿಳಂಬ

| Published : Jun 10 2024, 12:30 AM IST

ಸಾರಾಂಶ

ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ನ್ಯಾಯಬೆಲೆ ಅಂಗಡಿ ಮುಂಭಾಗದಲ್ಲಿ ಪಡಿತರಕ್ಕಾಗಿ ಸಾಲುಗಟ್ಟಿ ಕುಳಿತ ಫಲಾನುಭವಿಗಳು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ನನ್ನಿವಾಳ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುವ ಬಂಡೆಹಟ್ಟಿ, ನಕ್ಲೋರಹಟ್ಟಿ, ಚಿಕ್ಕಾಟ್ಲಹಟ್ಟಿ, ರತ್ನಗಿರಿ ಮುಂತಾದ ಹಟ್ಟಿ ಪಡಿತರದಾರರಿಗೆ ಪ್ರತಿತಿಂಗಳು ನಿಯಮ ಬದ್ಧವಾಗಿ ಯಾವುದೇ ಪಡಿತರ ದೊರಕುತ್ತಿಲ್ಲ. ನ್ಯಾಯಬೆಲೆ ಅಂಗಡಿ ಮಾಲೀಕ ಕೇವಲ ಎರಡು ದಿನ ವಿತರಣೆ ಮಾಡಿ ನಂತರ ಪಡಿತರದಾರರಿಗೆ ಪಡಿತರ ಇಲ್ಲವೆಂದು ಸಬೂಬು ಹೇಳುತ್ತಾನೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಪ್ರತಿಯೊಂದು ಗ್ರಾಮೀಣ ಭಾಗದ ನ್ಯಾಯಬೆಲೆ ಅಂಗಡಿಯಲ್ಲಿ ತಿಂಗಳ ಮೊದಲ ವಾರವೇ ಪಡಿತರ ತಂದು ವಿತರಣೆ ಮಾಡಲಾಗುತ್ತಿದೆ. ಅದರೆ, ನನ್ನಿವಾಳದಲ್ಲಿ ಯಾವಾಗ ಪಡಿತರ ವಿತರಣೆ ಮಾಡುತ್ತಾರೇ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ನ್ಯಾಯಬೆಲೆ ಅಂಗಡಿ ಮುಂದೆ ಜನರು ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿರುತ್ತಾರೆ. ಆದರೆ ನನ್ನಿವಾಳ ಗ್ರಾಮ ಹೊರತು ಪಡಿಸಿ ಈ ನ್ಯಾಯಬೆಲೆ ಅಂಗಡಿಗೆ ಸಮೀಪದ ಜನರು ಬರುವ ಮುನ್ನವೇ ಪಡಿತರ ಖಾಲಿಯಾಗಿದೆ ಎನ್ನುತ್ತಾರೆಂದು ಗ್ರಾಮಸ್ಥರು ಆರೋಪಿಸಿದರು.

ಜೂನ್ ತಿಂಗಳ ಪಡಿತರ ಪಡೆಯಲು ಸುತ್ತಮುತ್ತಲ ಹಟ್ಟಿ ಜನರು ಅಂಗಡಿ ಮುಂದೆ ಕಾದುಕುಳಿತಿದ್ದರೂ ಇವರಿಗೆ ಪಡಿತರ ಪಡೆಯುವ ಭಾಗ್ಯ ಒದಗಿ ಬಂದಿಲ್ಲ. ಕಾರಣ, ನ್ಯಾಯಬೆಲೆ ಅಂಗಡಿಗೆ ಬೀಗಹಾಕಿದ್ದು ಅಂಗಡಿ ಮುಂಭಾಗದಲ್ಲೇ ಅವರು ಸಾಲುಗಟ್ಟಿ ನಿಂತಿರುತ್ತಾರೆ. ಪಡಿತರಕ್ಕಾಗಿ ಬೆಳಗ್ಗೆ ೪.೩೦ರಿಂದಲೇ ಕಾಯುತ್ತಿರುವ ಪಡಿತರು ಮನೆಯಲ್ಲಿ ಅಡುಗೆ ಮಾಡದೆ ಉಪವಾಸವಿದ್ದು, ಏನು ಸಿಗದೇ ಇದ್ದಾಗ ಬೆಳಗ್ಗೆಯಿಂದ ಸಂಜೆವರೆಗೂ ಕಾದುಕಾದು ವಾಪಾಸ್ ಹೋಗುತ್ತಾರೆ. ಕೆಲ ಸಂದರ್ಭದಲ್ಲಿ ಹೆಬ್ಬೆಟ್ಟು ಹಾಕಿಸಿಕೊಂಡರೂ ಪಡಿತರ ನೀಡುತ್ತಲ್ಲವೆಂಬುವುದು ಶಿವಮ್ಮ, ಪಾಲಯ್ಯ, ಗೀತಮ್ಮ, ಓಬಯ್ಯ, ಪಾಪಮ್ಮ ಮುಂತಾದವರು ಆರೋಪಿಸಿದ್ದಾರೆ.

ಮಾಹಿತಿ ಪಡೆದು ತಹಸೀಲ್ದಾರ್ ರೇಹಾನ್‌ಪಾಷ, ಆಹಾರ ಶಿರಸ್ತೇದಾರ್ ಶ್ರೀನಿವಾಸ್‌ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸುವಂತೆ ಸೂಚಿಸಿದ್ದಾರೆ. ಮೇಲಾಧಿಕಾರಿಗಳು ಬಂದಿದ್ದನ್ನು ತಿಳಿದ ನ್ಯಾಯಬೆಲೆ ಅಂಗಡಿ ಮಾಲೀಕ ಸರ್ವರ್‌ ಸಮಸ್ಯೆಯಿಂದ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಸಬೂಬು ಹೇಳಿದ್ದಾನೆ. ಬಂಡೆಹಟ್ಟಿ, ನಕ್ಲೋರಹಟ್ಟಿ, ಚಿಕ್ಕಾಟ್ಲಹಟ್ಟಿ, ರತ್ನಗಿರಿ ಇತರೆ ಗ್ರಾಮದ ನೂರಾರು ಜನರು ಪ್ರತಿತಿಂಗಳು ಪಡಿತರವಿಲ್ಲದೆ ತೊಂದರೆಗೆ ಒಳಗಾಗುತ್ತಿದ್ದಾರೆ ಎನ್ನಲಾಗಿದೆ.