ಸಾರಾಂಶ
ನ್ಯಾನೋ ಗೊಬ್ಬರಗಳನ್ನು ಬಳಸುವುದರಿಂದ ಪೋಷಕಾಂಶದ ಸದ್ಬಳಕೆಯಾಗುತ್ತದೆ.
ಬ್ಯಾಡಗಿ: ಕೃಷಿ ಇಲಾಖೆ ಹಾಗೂ ಕೋರಮಂಡಲ ಸಂಸ್ಥೆಯ ಸಹಭಾಗಿತ್ವದಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯೂ ಸಿಂಪಡಣೆ ಪ್ರಾತ್ಯಕ್ಷಿಕೆ ಬ್ಯಾಡಗಿ ಸುತ್ತಮುತ್ತಲ ರೈತರ ಜಮೀನಿನಲ್ಲಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ, ನ್ಯಾನೋ ಗೊಬ್ಬರಗಳನ್ನು ಬಳಸುವುದರಿಂದ ಪೋಷಕಾಂಶದ ಸದ್ಬಳಕೆಯಾಗುತ್ತದೆ. ನ್ಯಾನೋ ಗೊಬ್ಬರಗಳ ನಿಖರ ಮತ್ತು ಉದ್ದೇಶಿತ ಬಳಕೆ ಪರಿಸರಕ್ಕೆ ಹಾನಿಯಾಗದಂತೆ ಬೆಳೆಗಳ ಸಾರಜನಕದ ಅಗತ್ಯವನ್ನು ಪೂರೈಸುತ್ತದೆ. ಪೋಷಕಾಂಶಗಳ ಪೋಲಾಗುವಿಕೆ ಕಡಿಮೆಯಾಗುತ್ತದೆ ಹಾಗೂ ಸಾಮಾನ್ಯ ರಸಗೊಬ್ಬರ ಬಳಕೆಯಿಂದಾಗುವ ಮಣ್ಣು ಮತ್ತು ನೀರಿನ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದರು.ಯೂರಿಯಾ ಗೊಬ್ಬರ ಬಳಕೆ ಬ್ರೇಕ್: ಬೆಳೆಯ ಬೆಳವಣಿಗೆಯ ಹಂತಗಳಲ್ಲಿ ಇದನ್ನು ಸಿಂಪಡಿಸುವುದರಿಂದ ಮೇಲುಗೊಬ್ಬರವಾಗಿ ಬಳಸುವ ಯೂರಿಯ ಗೊಬ್ಬರವನ್ನು ಶೇ. 50 ವರೆಗೆ ಕಡಿಮೆ ಮಾಡಬಹುದು. ಇದರ ಉತ್ತಮ ಹರಡುವಿಕೆ ಸಾಮರ್ಥ್ಯ ಮತ್ತು ಸಮೀಕರಣವು ಹೆಚ್ಚು ಕ್ಲೋರೋಫಿಲ್, ದ್ಯುತಿ ಸಂಶ್ಲೇಷಣೆ ದಕ್ಷತೆ, ವರ್ಧಿತ ಗುಣಮಟ್ಟ ಮತ್ತು ಉತ್ತಮ ಬೆಳೆ ಇಳುವರಿಗೆ ಕಾರಣವಾಗುತ್ತದೆ. ಇವುಗಳನ್ನು ರೈತರು ಸುಲಭವಾಗಿ ಸಾಗಾಣಿಕೆ ಮಾಡಬಹುದು. ಕಡಿಮೆ ಜಾಗದಲ್ಲಿ ಸಂಗ್ರಹಿಸಬಹುದು ಮತ್ತು ಸುಲಭವಾಗಿ ಬೆಳೆಯ ಯಾವುದೇ ಹಂತದಲ್ಲಿ ಬಳಸಬಹುದಾಗಿದೆ ಎಂದರು.
ಕಡಿಮೆ ಖರ್ಚು ಹೆಚ್ಚು ಲಾಭ: ಕೋರಮಂಡಲ ಸಂಸ್ಥೆಯ ಸಂಜಯ್ ಮಾತನಾಡಿ, ನ್ಯಾನೋ ಯೂರಿಯಾ ಶೇ. 20 ಸಾರಜನಕವನ್ನು ಹೊಂದಿದ್ದು ಹಾಗೂ ನ್ಯಾನೋ ಡಿಎಪಿ ಶೇ. 8 ಸಾರಜನಕ ಮತ್ತು ಶೇ. 16 ರಂಜಕವನ್ನು ಹೊಂದಿದೆ. ಬೆಳೆ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಪೋಷಕಾಂಶಗಳನ್ನು ಒದಗಿಸಿ, ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಹಳಷ್ಟು ರೈತರು ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಹರಳು ಯೂರಿಯೂ ಗೊಬ್ಬರವನ್ನು ಕೈಯಿಂದ ಹಾಕುತ್ತಾರೆ. ಕೈಯಿಂದ ಗೊಬ್ಬರ ಹಾಕುವುದರಿಂದ ಶೇ. 30ರಷ್ಟು ಮಾತ್ರ ಬೆಳೆಗಳಿಗೆ ಬಳಕೆಯಾಗುತ್ತದೆ. ಆದರೆ ನ್ಯಾನೋ ಯೂರಿಯಾ, ಡಿಎಪಿ ಡ್ರೋನ್ ಮೂಲಕ ಅಥವಾ ಸ್ಪ್ರೇಯರ್ ಮೂಲಕ 5 ಎಂಎಲ್ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಿಸಿದರೆ ಶೇ. 80ರಷ್ಟು ಬೆಳೆಗಳಿಗೆ ತಲುಪುತ್ತದೆ. ಅಲ್ಲದೆ ಇದು ಕಡಿಮೆ ಅವಧಿಯಲ್ಲಿ ಕಡಿಮೆ ಖರ್ಚು ಮತ್ತು ಕಡಿಮೆ ಶ್ರಮದ ಮೂಲಕ ಹೆಚ್ಚು ಬೆಳೆಗಳಿಗೆ ತಲುಪುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಸದಸ್ಯರಾದ ಬಸವರಾಜ ಸಂಕಣ್ಣನವರ, ಈಶ್ವರ ಮಠದ, ರವಿ ಕಲ್ಲಾಪುರ, ರಾಜಭಕ್ಷ, ಮಾರುತಿ, ಕಿರಣ, ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ, ಇತರರು ಉಪಸ್ಥಿತರಿದ್ದರು.