ವಿಟ್ಲ: ವಿದ್ಯಾರ್ಥಿಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯುಕ್ತ ಶಿಕ್ಷಣ ಒದಗಿಸಬೇಕು. ಶಿಸ್ತು, ಉತ್ತಮ ನಡವಳಿಕೆ, ಜೀವನ ಮೌಲ್ಯದ ಪಾಠ ಸಿಗಬೇಕು ಎಂದು ಮೂಡುಬಿದರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ ಗಾಳಿಮನೆ ಹೇಳಿದರು.
ಅವರು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಪಿಯುಸಿ ವಿಭಾಗದ ಎ ವೈಬ್ರೆಂಟ್ ಬಿಗಿನಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಪುಣೆಯ ರಾಮ ಕೃಷಿ ರಸಾಯನ ಕಂಪನಿಯ ಅಕೌಂಟ್ಸ್ ಮತ್ತು ಫೈನಾನ್ಸ್ ಮುಖ್ಯಸ್ಥ ಅರವಿಂದ ರೈ ಅರ್ಪಿಣಿಗುತ್ತು ಮಾತನಾಡಿ, ಉತ್ತಮ ವಿದ್ಯಾಸಂಸ್ಥೆಗೆ ಸೇರ್ಪಡೆಗೊಳಿಸಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದು ಹೆತ್ತವರ ಆಶಯವಾಗಿರುತ್ತದೆ. ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಯೋಗ್ಯ ಶಿಕ್ಷಣ ಲಭ್ಯವಾಗುತ್ತದೆ ಎಂದು ಹೇಳಿದರು.ಶ್ರೀ ಭಾರತೀ ಸಮೂಹ ಸಂಸ್ಥೆಯ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಅಧ್ಯಕ್ಷತೆ ವಹಿಸಿದ್ದರು. ದೀಪಾ ಅರವಿಂದ ರೈ, ಶ್ರೀ ಭಾರತೀ ಸಮೂಹ ಸಂಸ್ಥೆಯ ಕೋಶಾಧಿಕಾರಿ ಉದಯಶಂಕರ್ ನೀರ್ಪಾಜೆ, ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್, ಯಕ್ಷಗಾನ ಕಲಾವಿದ ಲಕ್ಷ್ಮಣ ಕುಮಾರ್ ಮರಕಡ ಮತ್ತು ಸಂಗೀತ ಶಿಕ್ಷಕ ವೆಂಕಟಯಶಸ್ವಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 9ನೇ ರಾಂಕ್ ಪಡೆದ ಶ್ರೀರಕ್ಷಾ ಎಂ. ಮತ್ತು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 15ನೇ ರಾಂಕ್ ಪಡೆದ ಶ್ರೀಶಾಂತ್ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಪ್ರಾಂಶುಪಾಲ ಸಂದೀಪ್ ಆಚಾರ್ಯ ಸ್ವಾಗತಿಸಿದರು. ಇಂಗ್ಲಿಷ್ ಉಪನ್ಯಾಸಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಡಾ. ನಿಶಿತಾ ವಂದಿಸಿದರು.