ಸಾರಾಂಶ
ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾಹನ ಚಾಲಕರ ಸಂಘದ ವತಿಯಿಂದ 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಸಮಾರಂಭ ಅ.1ರಂದು ನಾಪೋಕ್ಲು ಮಾರುಕಟ್ಟೆ ಆವರಣದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾಹನ ಚಾಲಕರ ಸಂಘದ ವತಿಯಿಂದ 33ನೇ ವರ್ಷದ ಅದ್ದೂರಿ ಆಯುಧ ಪೂಜೆ ಸಮಾರಂಭ ಅ.1ರಂದು ನಾಪೋಕ್ಲು ಮಾರುಕಟ್ಟೆ ಆವರಣದಲ್ಲಿ ನಡೆಯಲಿದೆ ಎಂದು ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಅಧ್ಯಕ್ಷ ಟಿ.ಪಿ ಸುಕುಮಾರ್ ಹೇಳಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುಧಾ ಪೂಜೆ ಅಂಗವಾಗಿ ಮಧ್ಯಾಹ್ನ 2 ಗಂಟೆಗೆ ಹಳೆ ತಾಲೂಕಿನಿಂದ ಅಲಂಕೃತ ವಾಹನಗಳ ಮೆರವಣಿಗೆ ನಡೆಯಲಿದೆ. 4 ಗಂಟೆಗೆ ಮಾರುಕಟ್ಟೆ ಆವರಣದಲ್ಲಿ ವಾಹನಗಳ ಸಾಮೂಹಿಕ ಆಯುಧ ಪೂಜೆ ನಡೆಯಲಿದೆ ಎಂದರು.
ಸೈಕಲ್, ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಸಂಘದ ವತಿಯಿಂದ ವಿತರಿಸಲಾಗುವುದು.ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಟಿ.ಪಿ.ಸುಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದರು.ಸಭಾ ಕಾರ್ಯಕ್ರಮದ ಬಳಿಕ ಭದ್ರಾವತಿ ಬ್ರದರ್ಸ್ ಸೌಂಡ್ಸ್ ಲೈಟಿಂಗ್ಸ್ ಆ್ಯಂಡ್ ಇವೆಂಟ್ಸ್ ವತಿಯಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ಉತ್ತಮ ಸೇವೆ ಸಲ್ಲಿಸಿದ ಆಟೋ ಚಾಲಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸತೀಶ್, ಖಜಾಂಚಿ ಚೇತನ್, ಗೌರವ ಅಧ್ಯಕ್ಷ ರಜಾಕ್ ಸದಸ್ಯರಾದ ಮಿಥುನ್, ದೀಪು, ಸೋಮಣ್ಣ ಉಪಸ್ಥಿತರಿದ್ದರು.