ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಶುಕ್ರವಾರ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ದಿ.ಮೇಕೇರಿರ ಕಾರ್ಯಪ್ಪ ಸ್ಮರಣಾರ್ಥ ಜಿಲ್ಲಾಮಟ್ಟದ ಅಂತರ್ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆ ನಡೆಯಿತು.ಸ್ಪರ್ಧೆಯಲ್ಲಿ ಕೂಡಿಗೆ ಸೈನಿಕ್ ಶಾಲೆಯ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಪೊನ್ನಂಪೇಟೆಯ ಕೆಪಿಎಸ್ ಪ್ರೌಢಶಾಲೆಯ ತಂಡ ದ್ವಿತೀಯ ಸ್ಥಾನ, ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲೆ, ಮೂರ್ನಾಡಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆ ಹಾಗೂ ವಿರಾಜಪೇಟೆಯ ಕಾವೇರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ ಕ್ರಮವಾಗಿ ತೃತೀಯ, ಚತುರ್ಥ ಹಾಗೂ ಐದನೇ ಸ್ಥಾನ ಪಡೆಯಿತು. ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 15 ತಂಡಗಳು ಪಾಲ್ಗೊಂಡಿದ್ದವು.
ಮೊದಲಿಗೆ ಅರ್ಹತಾ ಸುತ್ತಿನ ಸ್ಪರ್ಧೆ ನಡೆದು ಐದು ತಂಡಗಳನ್ನು ಮೌಖಿಕ ಸುತ್ತಿಗೆ ಆಯ್ಕೆ ಮಾಡಿಕೊಳ್ಳಲಾಯಿತು. ಹತ್ತು ಸುತ್ತಿನಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು. 128 ಅಂಕ ಗಳಿಸಿ ಕೂಡಿಗೆಯ ಸೈನಿಕ್ ಶಾಲೆಯ ತಂಡದ ವಿದ್ಯಾರ್ಥಿಗಳಾದ ಉನ್ನತೇಶ್ ಎಸ್.ಎಂ., ನಿಶಾಂತ್ ನಾರಾಯಣ, ಪ್ರಜ್ವಲ್ ಮೇಟಿ ಮತ್ತು ಪ್ರಣವ್ ರಾವ್ ವಿಜೇತರಾಗಿ ಹೊರಹೊಮ್ಮಿದರು.74 ಅಂಕಗಳಿಸಿದ ಪೊನ್ನಂಪೇಟೆಯ ಕೆಪಿಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ತೇಜಸ್ವಿನಿ ಭಟ್, ಮೊಹಮ್ಮದ್ ಆಶಿಕ್, ಲಿಖಿತ ಆರ್. ಮತ್ತು ನಿಶ್ಮಿತ ವಿ.ಡಿ. ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ನಾಪೋಕ್ಲುವಿನ ಅಂಕುರ್ ಶಾಲೆಯ ವಿದ್ಯಾರ್ಥಿಗಳ ತಂಡ 68 ಅಂಕ, ಮೂರ್ನಾಡಿನ ಜ್ಞಾನಜ್ಯೋತಿ ಪ್ರೌಢಶಾಲೆಯ ತಂಡ 61 ಅಂಕ ಹಾಗೂ ವಿರಾಜಪೇಟೆಯ ಕಾವೇರಿ ಪ್ರೌಢಶಾಲೆಯ ತಂಡ 51 ಅಂಕಗಳನ್ನು ಗಳಿಸಿತು.
ಸಮಾರೋಪ:ಸಮಾರೋಪ ಸಮಾರಂಭದಲ್ಲಿ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ದಂತವೈದ್ಯೆ, ಸರ್ಜನ್ ನೂರ್ ಫಾತಿಮಾ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಸ್ಪರ್ಧಾ ಮನೋಭಾವವನ್ನು, ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಬೇಕು. ಮುಂದೆ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಲು ಸ್ಫೂರ್ತಿ ಸಿಕ್ಕಂತಾಗುತ್ತದೆ. ಸಮಯದ ಸದುಪಯೋಗ ಪಡಿಸಿಕೊಳ್ಳುವುದರಿಂದ ಮುಂದಿನ ಭವಿಷ್ಯಕ್ಕೆ ಸಹಕಾರಿ ಎಂದರು.ಸಂಸ್ಥೆಯ ಅಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ ಮಾತನಾಡಿ, ಸಾಮಾನ್ಯ ಜ್ಞಾನ ವೃದ್ಧಿಸುವ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.
ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಕಲ್ಯಾಟಂಡ ಶಾರದಾ ಅಪ್ಪಣ್ಣ, ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ಬಿದ್ದಾಟ೦ಡ ಪಾಪ ಮುದ್ದಯ್ಯ, ಬೊಪ್ಪಂಡ ಕುಶಾಲಪ್ಪ (ನಿವೃತ ಡಿವೈಎಸ್‌ಪಿ), ಶಿಕ್ಷಕ ಭಗವತಿ ಪ್ರಸಾದ್ ಅಂಬ್ರಟಿ, ಮೂಡೇರ ಕಾಳಯ್ಯ, ಶಿಕ್ಷಕ ವೃಂದ ಪಾಲ್ಗೊಂಡಿದ್ದರು.ಬಲ್ಲಮಾವಟಿ ನೇತಾಜಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಸಿ.ಎಸ್.ಸುರೇಶ್ ಹಾಗೂ ಪೊನ್ನಂಪೇಟೆಯ ಕೆಪಿಎಸ್ ಶಾಲೆಯ ಗಣಿತ ಶಿಕ್ಷಕ ಅಯ್ಯಪ್ಪ ಪಿ.ಆರ್.ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು.