ನಾಪೋಕ್ಲು: ಪ್ರವಾಹ ಇಳಿಮುಖ

| Published : Jul 21 2024, 01:16 AM IST

ಸಾರಾಂಶ

ನಾಪೋಕ್ಲು ಹೋಬಳಿ ವ್ಯಾಪ್ತಿ ಪ್ರದೇಶಗಳಲ್ಲಿ ಶನಿವಾರ ಮಳೆ ಪ್ರಮಾಣ ಕಡಿಮೆಯಾಗಿದೆ. ನದಿ ತೊರೆ, ಪ್ರವಾಹ ಇಳಿಮುಖಗೊಂಡಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಪೋಕ್ಲು ಹೋಬಳಿ ವ್ಯಾಪ್ತಿ ಪ್ರದೇಶಗಳಲ್ಲಿ ಶನಿವಾರ ಮಳೆ ಪ್ರಮಾಣ ಕಡಿಮೆಯಾಗಿ ಗ್ರಾಮಗಳಲ್ಲಿ ನದಿ, ತೊರೆ, ಗದ್ದೆ , ತೋಟಗಳು ಜಲವೃತಗೊಂಡಿದ್ದ ಪ್ರವಾಹದ ಪ್ರಮಾಣ ತಗ್ಗಿ ಇಳಿಮುಖಗೊಳ್ಳುತ್ತಿದೆ.

ನಾಪೋಕ್ಲು - ಮೂರ್ನಾಡು ಸಂಪರ್ಕ ರಸ್ತೆಯ ಕಳೆದೆರಡು ದಿನಗಳಿಂದ ಕಾವೇರಿ ಪ್ರವಾಹದಿಂದಾಗಿ ಸಂಚಾರ ಸ್ಥಗಿತಗೊಂಡಿದ್ದು ಶನಿವಾರವು ಮುಂದುವರೆದಿದೆ. ಸಾರ್ವಜನಿಕರು ಪರ್ಯಾಯ ಸಂಪರ್ಕ ರಸ್ತೆಯಾಗಿ ನಾಪೋಕ್ಲು ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ ಹೊದ್ದೂರು ಮಾರ್ಗವಾಗಿ ಮೂರ್ನಾಡಿಗೆ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ.

ಪ್ರವಾಹ ಇರುವ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ನಾಪೋಕ್ಲು - ಕಲ್ಲುಮೊಟ್ಟೆ ರಸ್ತೆಯ ಚೆರಿಯ ಪರಂಬುವಿನಲ್ಲಿ ಕಾವೇರಿ ಪ್ರವಾಹದ ನೀರು ಹರಿಯುತ್ತಿದ್ದು ಸಂಪರ್ಕ ಸ್ಥಗಿತ ಮುಂದುವರೆದಿದೆ. ಎಮ್ಮೆಮಾಡು, ಕೈಕಾಡು ಸೇರಿದಂತೆ ಕಾವೇರಿ ನದಿ, ತೊರೆ ಪ್ರವಾಹದಿಂದ ಮುಳುಗಿದ್ದು ಬತ್ತ ಗದ್ದೆಗಳು, ಕಾಫಿ ತೋಟಗಳು ಯಥಾಸ್ಥಿತಿಯಲ್ಲಿದೆ. ಗಾಳಿ-ಮಳೆಯಿಂದಾಗಿ ಹಲವೆಡೆ ಮರಗಳು ಬಿದ್ದು ನಷ್ಟ ಸಂಭವಿಸಿದೆ. ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಮರವೊಂದು ಮುರಿದುಬಿದ್ದಿದ್ದು ಬಳಿಕ ತೆರವುಗೊಳಿಸಲಾಯಿತು.

ಬಲ್ಲಮಾವಟಿ ಗ್ರಾಮದ ಮಾದಪ್ಪ ಎನ್ ಪಿ ಅವರ ವಾಸದ ಮನೆಯು ಮಳೆ ಗಾಳಿಯಿಂದಾಗಿ ಹಾನಿಗೊಂಡಿದ್ದು ಸ್ನಾನದ ಕೋಣೆಯ ಗೋಡೆಯು ಕುಸಿದಿದೆ. ಹೆಂಚುಗಳು ಹಾನಿಗೊಂಡಿವೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ನೆಲಜಿ, ಬಲ್ಲಮಾವಟ್ಟಿ, ಎಮ್ಮೆಮಾಡು, ಕಕ್ಕಬೆ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮಳೆ ಗಾಳಿಯಿಂದಾಗಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿ ಚೆಸ್ಕಂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವರ್ತರಾಗಿದ್ದಾರೆ.

ಕಳೆದ 24 ಗಂಟೆ ಅವಧಿಯಲ್ಲಿ ನಾಪೋಕ್ಲು 57.2.ಮಿ.ಮೀ. ಕಕ್ಕಬೆ ನಾಲಾಡಿ 122.4. ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.