ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೂವಲೆ ಪುಟ್ಟ್, ಮದ್ದ್ ಪುಟ್ಟ್, ಬಾಳೆನುರ್ಕ್, ಬಡವಕಜ್ಜಾಯ, ಕೇಂಬು ಕರಿ, ಕಾಡು ಮಾಂಗೆ ಕರಿ, ಕುರುಕರಿ, ಚಕ್ಕೆಕುರು ಪಜ್ಜಿ… ಒಂದೇ ಎರಡೇ... ಹತ್ತು ಹಲವು ಕೊಡವ ಜನಾಂಗದ ತಿಂಡಿ ತಿನಿಸುಗಳು ನೆರೆದಿದ್ದವರ ಬಾಯಲ್ಲಿ ನೀರೂರಿಸಿದವು. ಕೈಲ್ ಪೋಳ್ದ್ ತೀನಿ ನಮ್ಮೆಯ ವೈವಿಧ್ಯಮಯ ಕಾರ್ಯಕ್ರಮಗಳಿಗೆ ನಾಪೋಕ್ಲು ಕೊಡವ ಸಮಾಜ ಸಾಕ್ಷಿಯಾಯಿತು.ನಾಪೋಕ್ಲು ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಗುರುವಾರ ನಡೆದ ಕೈಲ್ ಪೋಳ್ದ್ ತೀನಿ ನಮ್ಮೆ ಕಾರ್ಯಕ್ರಮವನ್ನು ಸಮಾಜಸೇವಕಿ ಕೇಟೋಳಿರ ಜಾಜಿ ಕುಟ್ಟಪ್ಪ ಮತ್ತು ಪೋಳ್ದ್ (ತೀನಿ) ತಿನಿಸುಗಳ ಪ್ರದರ್ಶನವನ್ನು ಸಮಾಜಸೇವಕಿ ಮಂಡೀರ ಸರೋಜ ದೇವಯ್ಯ ಉದ್ಘಾಟಿಸಿದರು.
ನಾಪೋಕ್ಲು ಕೆಪಿಎಸ್ ಶಾಲೆಯ ಪ್ರಾಂಶುಪಾಲ ಮೇದುರ ವಿಶಾಲ ಕುಶಾಲಪ್ಪ ಮಾತನಾಡಿ, ಕೊಡವ ಜನಾಂಗ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆಗಷ್ಟೇ ಜನಾಂಗದ ಅಭಿವೃದ್ಧಿ ಸಾಧ್ಯ ಎಂದರು.ಸಮಾಜದ ಮಕ್ಕಳಿಗೆ ಪಾರಂಪರಿಕ ಸಂಪ್ರದಾಯಗಳನ್ನು ತಿಳಿಸುವ ಕೆಲಸ ಆಗಬೇಕಿದೆ. ಮಕ್ಕಳ ಪೋಷಣೆಯಲ್ಲಿ ತಾಯಂದಿರ ಪಾತ್ರ ಮಹತ್ವದ್ದು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಂಥದ್ದು ಪೋಷಕರ ಜವಾಬ್ದಾರಿ ಎಂದರು.ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಮಾತನಾಡಿ, ಹಬ್ಬ, ಹರಿದಿನ, ಆಚಾರ, ವಿಚಾರಗಳಲ್ಲಿ ಕೊಡವ ಭಾಷೆಯ ಬಳಕೆ ಹೆಚ್ಚು ಹೆಚ್ಚು ಆಗಬೇಕು. ಭಾಷೆ ಉಳಿಸುವ ಜವಾಬ್ದಾರಿ ತಾಯಂದಿರ ಮೇಲಿದೆ. ತೀನಿ ನಮ್ಮೆ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಕೊಡವ ಮಹಿಳೆಯರು ಪಾಲುಗೊಳ್ಳಬೇಕೆಂದರು.
ಕೊಡವ ಸಂಸ್ಕೃತಿ ಬೆಳೆಸುವಲ್ಲಿ ಕೊಡವ ಮಹಿಳೆಯರ ಪಾತ್ರ ವಿಷಯದ ಕುರಿತು ಕದ್ದಣಿಯಂಡ ವಂದನಾ ಚಿಣ್ಣಪ್ಪ ವಿಚಾರ ಮಮಡಿಸಿದರು.ಅಧ್ಯಕ್ಷತೆ ವಹಿಸಿದ್ದ ಮೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಲೆಯಡ ನಿಶಾ ಮೇದಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬಲ್ಲಮಾವಟಿ ಗ್ರಾಮದ ಲೇಖಕಿ ಅಪ್ಪಚೆಟ್ಟೋಳಂಡ ವನು ವಸಂತ, ಮಡಿಕೇರಿಯ ಕೆಎಸ್‌ಒಯು ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಮುಕ್ಕಾಟಿರ ಸ್ಮಿತಾ ಸುಬ್ಬಯ್ಯ ಸಾಧನೆಗಳನ್ನು ಗುರುತಿಸಿ ಗಣ್ಯರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಕೊಡವ ಸಮಾಜದ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ಕೊಡವ ಸಮಾಜದ ಮತ್ತು ಮೊಮ್ಮಕ್ಕಡ ಪರಿಷತ್ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.ಮೊಮ್ಮಕ್ಕಡ ಪರಿಷತ್ ನಿರ್ದೇಶಕಿ ಮಮತಾ ಪ್ರಾರ್ಥಿಸಿದರು. ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿದರು. ಕಲಿಯಂಡ ಗೀತಾ ವಂದಿಸಿದರು.
ಬಾಯಲ್ಲಿ ನೀರೂರಿಸುವ ಮಳೆಗಾಲದ ಖಾದ್ಯಗಳಾದ ಸಾರು, ಸಾಂಬಾರು, ಚಟ್ನಿ, ಪಲ್ಯ ಸೇರಿದಂತೆ ನೂರಾರು ತಿನಿಸು ಹಾಗೂ ವಿವಿಧ ಕ್ರೀಡಾ ಕೂಟ ಸ್ಪರ್ಧೆ ಆಯೋಜಿಸಿದ ಬಳಿಕ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಲಾಯಿತು .