ಸಾರಾಂಶ
ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಥಳೀಯ ಪೊಲೀಸರು ಕಟ್ಟುನಿಟ್ಟಿನಿಂದ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಗುರುವಾರ ಸ್ಥಳೀಯ ಪಟ್ಟಣದಲ್ಲಿ ಸೂಕ್ತ ದಾಖಲಾತಿಗಳು ಇಲ್ಲದೆ ವಾಹನ ಚಲಾಯಿಸುವವರ ವಿರುದ್ಧ ಹಾಗೂ ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಥಳೀಯ ಪೊಲೀಸರು ಕಟ್ಟುನಿಟ್ಟಿನಿಂದ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಗುರುವಾರ ಸ್ಥಳೀಯ ಪಟ್ಟಣದಲ್ಲಿ ಸೂಕ್ತ ದಾಖಲಾತಿಗಳು ಇಲ್ಲದೆ ವಾಹನ ಚಲಾಯಿಸುವವರ ವಿರುದ್ಧ ಹಾಗೂ ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು.ಇಲ್ಲಿನ ಕೊಡವ ಸಮಾಜದ ರಸ್ತೆಯಲ್ಲಿ ಎರಡು ಬದಿಗಳು ವಾಹನ ಪಾರ್ಕಿಂಗ್ ಮಾಡುತ್ತಿದ್ದ ಪರಿಣಾಮ ವಾಹನಗಳ ದಟ್ಟಣೆಯಿಂದ ಸಮಸ್ಯೆ ಉದ್ಬವಿಸಿರುವುದರ ಕುರಿತು ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದರು. ಗುರುವಾರ ದಿಢೀರ್ ತಪಾಸಣೆಗಿಳಿದ ಪೊಲೀಸರು ಎಸ್ಐ ಮಂಜುನಾಥ ನೇತೃತ್ವದಲ್ಲಿ ಸೂಕ್ತ ತಪಾಸಣೆ ನಡೆಸಿ ಕಾನೂನು ಉಲ್ಲಂಘಿಸಿದವರ ವಿರುದ್ಧ ದಂಡ ವಿಧಿಸಿದರು.
ಪಟ್ಟಣದಲ್ಲಿ ಸಂಚರಿಸುವ ಆಟೋರಿಕ್ಷಾಗಳಿಗೆ ಎನ್‌ಪಿಕೆ ಫಲಕ ಅಳವಡಿಸಬೇಕೆಂದು ಈ ಹಿಂದೆ ಹಲವು ಬಾರಿ ಸೂಚನೆ ನೀಡಲಾಗಿತ್ತು .ಇದನ್ನು ಉಲ್ಲಂಘಿಸಿ ಹಲವರು ಪಟ್ಟಣದಲ್ಲಿ ಆಟೋ ಚಾಲನೆ ಮಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಅಂತಹ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದು ಬುಧವಾರ ಕಕ್ಕಬೆಯಲ್ಲಿ ಇನ್ಶುರೆನ್ಸ್ ಇಲ್ಲದ ಆಟೋವನ್ನು ವಶಕ್ಕೆ ಪಡೆದು ಸೂಕ್ತ ಕ್ರಮ ಕೈಗೊಂಡಿದ್ದಾರೆ.ಚಾಲನಾ ಪರವಾನಗಿ, ಇನ್ಸೂರೆನ್ಸ್ ಇಲ್ಲದೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರಿ ವಾಹನಗಳಿಗೆ ಜನಸಾಮಾನ್ಯರಿಗೆ ಅಡ್ಡಿಪಡಿಸುವುದು, ಅಪ್ರಾಪ್ತ ಯುವಕರು ವಾಹನ ಚಾಲನೆ ಮಾಡುವುದು, ಅನಧಿಕೃತವಾಗಿ ಆಟೋ ಬಾಡಿಗೆ ಚಲಾಯಿಸುವುದು ಸೇರಿದಂತೆ ಕಾನೂನು ಉಲ್ಲಂಘಿಸಿದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಣಾಧಿಕಾರಿ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.