ಸಾರಾಂಶ
ಕಳೆದ ಮೂರು-ನಾಲ್ಕು ದಿನಗಳಿಂದ ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿ -ಮಳೆಯಿಂದಾಗಿ ಅಲ್ಲಲ್ಲಿ ಮರದ ರೆಂಬೆಗಳು ಮುರಿದು ಬಿದ್ದು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಹುತೇಕ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದು ಬಹುತೇಕ ಕಾಫಿ ತೋಟಗಳು ಪ್ರವಾಹದಲ್ಲಿ ಮುಳುಗಿವೆ. ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಳೆದ ಮೂರು-ನಾಲ್ಕು ದಿನಗಳಿಂದ ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಗಾಳಿ -ಮಳೆಯಿಂದಾಗಿ ಅಲ್ಲಲ್ಲಿ ಮರದ ರೆಂಬೆಗಳು ಮುರಿದು ಬಿದ್ದು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಹುತೇಕ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ.ಕಾವೇರಿ ನದಿ ತುಂಬಿ ಹರಿಯುತ್ತಿದ್ದು ಬಹುತೇಕ ಕಾಫಿ ತೋಟಗಳು ಪ್ರವಾಹದಲ್ಲಿ ಮುಳುಗಿವೆ. ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಬುಧವಾರ ಸುರಿದ ಧಾರಾಕಾರ ಮಳೆ ಗಾಳಿಯಿಂದ ಕಕ್ಕಬೆ ಕುಂಜಿಲ ಪಂಚಾಯಿತಿ ವ್ಯಾಪ್ತಿಯ ಕೊಡಿಮಣಿಯಂಡ ಪೂವಣ್ಣ ಅವರ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಜನಾರ್ದನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಲೋಕೇಶ್, ಗ್ರಾಮ ಪಂಚಾಯಿತಿ ಸದಸ್ಯ ಕೊಡಿಮಣಿಯಂಡ ಬೋಪಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇಲ್ಲಿಗೆ ಸಮೀಪದ ನಾಪೋಕ್ಲು-ಮೂರ್ನಾಡು ಸಂಪರ್ಕ ರಸ್ತೆಯ ಹೊದ್ದೂರಿನ ಗ್ರಾಮದ ಬೊಳಿಬಾಣೆ ಎಂಬಲ್ಲಿ ಕಾವೇರಿ ಪ್ರವಾಹದಿಂದ ಜಲಾವೃತವಾಗಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಚೆರಿಯಪರಂಬುವಿನಲ್ಲೂ ರಸ್ತೆ ಕಾವೇರಿ ಪ್ರವಾಹದಿಂದ ಜಲಾವೃತವಾಗಿ ನಾಪೋಕ್ಲು-ಕಲ್ಲುಮೊಟ್ಟೆ ಸಂಪರ್ಕ ರಸ್ತೆ ಕಡಿತಗೊಂಡಿದೆ. ನಾಪೋಕ್ಲು ಪಾರಾಣೆ ಮಾರ್ಗವಾಗಿವಿರಾಜಪೇಟೆಗೆ ಸಾಗುವ ಬೊಳ್ಳುಮಾಡು ಮುಖ್ಯರಸ್ತೆಯಲ್ಲಿ ಪ್ರವಾಹದಿಂದ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.
ಎಮ್ಮೆಮಾಡಿನಲ್ಲಿರುವ ಗದ್ದೆಗಳು ಕಾವೇರಿ ಪ್ರವಾಹದಿಂದ ಸಂಪೂರ್ಣ ಜಲಾವೃತವಾಗಿವೆ. ಪಾರಾಣೆ ಗ್ರಾಮ ಪಂಚಾಯಿತಿಯ ಕೈಕಾಡು ಗ್ರಾಮದಲ್ಲಿಯೂ ಕೆಲವು ನಾಟಿ ಮಾಡಿದ ಗದ್ದೆಗಳು ಸೇರಿದಂತೆ ಬಹುತೇಕ ಗದ್ದೆಗಳು ಪ್ರವಾಹದಲ್ಲಿ ಗುರುವಾರ ಮುಳುಗಡೆಯಾಗಿವೆ.ಹದಗೆಟ್ಟ ರಸ್ತೆಗಳು:
ಬಿರುಸಿನ ಮಳೆಯಿಂದಾಗಿ ಬಹುತೇಕ ರಸ್ತೆಗಳು ಹದಗೆಟ್ಟಿವೆ. ನಾಪೋಕ್ಲು- ಮೂರ್ನಾಡು ಸಂಪರ್ಕ ರಸ್ತೆಯ ಕೊಟ್ಟಮುಡಿಯ ಕೂಡು ರಸ್ತೆಯ ಬಲಿ ತಗ್ಗು ಪ್ರದೇಶದ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿದೆ. ನಾಪೋಕ್ಲು- ಬೆಟ್ಟಗೇರಿ ಮುಖ್ಯರಸ್ತೆಯಲ್ಲಿ ಕೊಟ್ಟಮುಡಿ ಕಾವೇರಿ ನದಿ ಬಳಿ ರಸ್ತೆಯ ಬದಿಯಲ್ಲಿ ಅಪಾಯದ ಗುಂಡಿ ಗೋಚರಿಸಿದ್ದು ಹೆಚ್ಚಿನ ಅಪಾಯ ಸಂಭವಿಸುವ ಮುನ್ನ ದುರಸ್ತಿಪಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.ನಾಪೋಕ್ಲು ವ್ಯಾಪ್ತಿಯ ಬಹುತೇಕ ರಸ್ತೆಗಳಲ್ಲಿ ಹೊಂಡಗಳಾಗಿದ್ದು ಬೇತು ಗ್ರಾಮದಿಂದ ಬಲಮುರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಕ್ಕಿಕಡು ಬಳಿ ಮೋರಿ ಕುಸಿದು ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡ ಸೃಷ್ಟಿಯಾಗಿದ್ದು, ಸಂಚಾರಕ್ಕೆ ತೊಡಕಾಗಿತ್ತು.
ಗ್ರಾಮ ಪಂಚಾಯಿತಿ ವತಿಯಿಂದ ಇದೀಗ ಜಲ್ಲಿ ಸುರಿದು ಗುಂಡಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಭಾಗದಲ್ಲಿ ಎರಡು ಗದ್ದೆಗಳ ನಡುವಿನ ರಸ್ತೆಯನ್ನು ತುರ್ತಾಗಿ ದುರಸ್ತಿ ಪಡಿಸಬೇಕಾದ ಅಗತ್ಯವಿದೆ.