ನಾಪೋಕ್ಲು: ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ರಾಜ್ಯೋತ್ಸವ

| Published : Nov 02 2024, 01:28 AM IST

ಸಾರಾಂಶ

ನಾಪೋಕ್ಲು ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನವನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನವನ್ನು ವಿತರಿಸಲಾಯಿತು.

ಇಲ್ಲಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಟ್ರಸ್ಟ್ ನಿರ್ದೇಶಕ ಮಕ್ಕಿ ಸುಬ್ರಮಣ್ಯ ಮಾತನಾಡಿ, ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.ಪ್ರಾಂಶುಪಾಲೆ ಬಿ.ಎಂ. ಶಾರದಾ ಮಾತನಾಡಿ, ಕನ್ನಡ ನಾಡಿನ ಏಕೀಕರಣಕ್ಕೆ ಹಲವು ಮಂದಿ ಕಾರಣಕರ್ತರಾಗಿದ್ದಾರೆ. ಅವರೆಲ್ಲರನ್ನು ಸ್ಮರಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಶಿಕ್ಷಕ ಭಗವತಿ ಪ್ರಸಾದ್ ಧ್ವಜಾರೋಹಣವನ್ನು ನೆರವೇರಿಸಿ, ಕನ್ನಡ ನಾಡಿನ ಇತಿಹಾಸ, ಆಳಿದ ರಾಜವಂಶಗಳು, ಕನ್ನಡ ಸಾಹಿತ್ಯದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಭೇತು ಗ್ರಾಮದ ರವಿ ಓಂಕಾರ್ ಮತ್ತು ತಂಡದವರಿಂದ ಕನ್ನಡ ಭಾವಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸಂಸ್ಥೆಯ ನಿರ್ದೇಶಕರು, ಶಿಕ್ಷಕವೃಂದ ಹಾಜರಿದ್ದರು.