ಕರ್ಮ ಶ್ರೇಷ್ಠತೆಯಿಂದ ನರ ನಾರಾಯಣ: ಮಾತಾಜಿ ಶಿವಲೀಲಾ

| Published : May 23 2024, 01:14 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ: ಕರ್ಮ ಶ್ರೇಷ್ಠತೆಯಿಂದ ನರ ನಾರಾಯಣನಾಗುತ್ತಾನೆ, ನಾರಿ ಮಹಾಲಕ್ಷ್ಮಿ ಜಗನ್ಮಾತೆಯಾಗುತ್ತಾಳೆ ಎಂದು ಓಂ ಶಾಂತಿ ಸತ್ಸಂಗ ಸಂಸ್ಥೆಯ ಮಾತಾಜಿ ಶಿವಲೀಲಾ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ:

ಕರ್ಮ ಶ್ರೇಷ್ಠತೆಯಿಂದ ನರ ನಾರಾಯಣನಾಗುತ್ತಾನೆ, ನಾರಿ ಮಹಾಲಕ್ಷ್ಮಿ ಜಗನ್ಮಾತೆಯಾಗುತ್ತಾಳೆ ಎಂದು ಓಂ ಶಾಂತಿ ಸತ್ಸಂಗ ಸಂಸ್ಥೆಯ ಮಾತಾಜಿ ಶಿವಲೀಲಾ ಹೇಳಿದರು.

ಇಲ್ಲಿಯ ಚನ್ನವೀರ ಶಿವಯೋಗಾಶ್ರಮದಲ್ಲಿ ನಡೆದ ಶ್ರೀ ಜಗದೀಶ್ವರಿ ಉಡಿ ತುಂಬುವ ಉತ್ಸವದಲ್ಲಿ ಆಶಿರ್ವಚನ ನೀಡಿದರು. ಜಗತ್ತಿನಲ್ಲಿ ಪಾಪಾತ್ಮರು, ಪುಣ್ಯಾತ್ಮರು, ಮಹಾತ್ಮರು, ದೇವಾತ್ಮರು ಹಲವರಿದ್ದಾರೆ. ಆದರೆ ಪರಮಾತ್ಮ ಒಬ್ಬನೇ. ನಾವೆಂದರೆ ಮೂಳೆ-ಮಾಂಸಗಳಿಂದಾದ ಶರೀರವಲ್ಲ, ನಾವೆಂದರೆ ಆತ್ಮ ಮಾತ್ರ. ಹಾಗಾಗಿ ಕೈಕರ್ಮದಲ್ಲಿದ್ದು, ಕರ್ಮಯೋಗಿಗಳಾಗಿ. ಆತ್ಮದಲ್ಲಿ ಸದಾ ಪರಮಾತ್ಮನ ನೆನೆಯುತಿರಬೇಕು. ಶರೀರಕ್ಕೆ ಪಂಚತತ್ವಗಳಿರುವಂತೆ ಆತ್ಮಕ್ಕೆ ಜ್ಞಾನ, ಶಾಂತಿ, ಸುಖ, ಪ್ರೀತಿ, ಆನಂದ, ಶಕ್ತಿ, ಶುದ್ಧಿ ಎಂಬ 7 ತತ್ವಗಳಿಂದ ಆತ್ಮ ಪವಿತ್ರವಾಗುತ್ತದೆ. ಪರಮಾತ್ಮ ಈ ಗುಣಗಳ ಶ್ರೋತೃ. ಪರಮಾತ್ಮನ ನೆನೆವಿನಿಂದ ಬಹುಜನ್ಮದ ವಿಕಾರ ದೂರಾಗುವುದು ಎಂದರು.

ಮುತ್ತೈದೆ ಜಗನ್ಮಾತೆ ಸ್ವರೂಪಿಣಿ. ಅವಳು ಮಹಾಲಕ್ಷ್ಮಿಯಂತೆ ಸದಾ ತಾಳಿ, ಕುಂಕುಮ, ಬಳೆ, ಮೂಗುತಿ, ಕಾಲುಂಗುರ ಎಂಬ ಪಂಚ ನಿಶಾನೆ ಧರಿಸಿರಬೇಕು. ಇದರಿಂದ ಮಾತ್ರ ಶ್ರೇಯಸ್ಸು ಎಂದು ಮತ್ತೈದೆತನದ ಪಾವಿತ್ರ್ಯತೆಯನ್ನು ವಿವರಿಸಿದರು.

ಎರಡು ದಿಗಳ ಉತ್ಸವದಲ್ಲಿ ರವಿವಾರ ರಾತ್ರಿಯಿಡೀ ಪ್ರವಚನ, ಶಿವಭಜನೆ ಜರುಗಿ ಭಾನುವಾರ ಬೆಳಿಗ್ಗೆಯಿಂದ ರುದ್ರಾಭಿಷೇಕ, ಜಗದೀಶ್ವರಿ ದೇವಿಯ ಮಹಾಪೂಜೆ, ಜಪಯಜ್ಞ, ಪ್ರವಚನ, ಉಡಿ ತುಂಬುವುದು, ಮಹಾ ಪ್ರಸಾದ ಕಾರ್ಯಕ್ರಮಗಳು ಜರುಗಿದವು. ಬನಹಟ್ಟಿಯ ರಘುನಾಥ ಮಹಾರಾಜ, ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ.ಯು.ಎಸ್.ಸ್ವಾಮಿ ಹಿರೇಮಠ, ಜಯಶ್ರೀ ಹಿರೇಮಠ ಹಾಜರಿದ್ದರು.ಮಹಾಲಿಂಗಪುರ ಅರ್ಬನ್ ಬ್ಯಾಂಕ್‌ ಅಧ್ಯಕ್ಷ ಶೇಖರ ಅಂಗಡಿ, ಬಿ.ಕೆ.ಜಾನಕಿ, ಮಹಾದೇವಪ್ಪ ಮುತ್ತೂರ, ಬಸವರಾಜ ಪಾಶ್ಚಾಪುರ, ರಮೇಶ ಯಡಳ್ಳಿ, ವಿಠ್ಠಲ ರೇಗೇಕರ, ವಿಲಾಸ ಕುಳ್ಳೊಳ್ಳಿ, ಬ್ರಹ್ಮಾನಂದ ರಾವಳ, ಸಿದ್ಧಪ್ಪ ಯರನಾಳ, ಕಲ್ಲಪ್ಪ ಚಿನಿವಾಲ, ರವಿ ಶೀಲವಂತ, ನಂದ ಘಟ್ನಟ್ಟಿ, ಅಚಪ್ಪ ಚಿಚಖಂಡಿ, ಬಸಪ್ಪ ತಾಳಿಕೋಟಿ, ದುಂಡಪ್ಪ ಮಡಿವಾಳ, ಬಸವರಾಜ ಘಂಟಿ ಸೇರಿದಂತೆ ಮುತ್ತೈದೆಯರು, ಭಕ್ತರು ಇದ್ದರು ಭಾಗವಹಿಸಿದ್ದರು.