ನರಗುಂದ ತಾಲೂಕಿನಿಂದ 4029 ಕಾಮಗಾರಿಗಳ ಮಾಹಿತಿಯನ್ನು ಜಲಸಂಚಾಯಿ ಜನಭಾಗಿದಾರಿ 1.0 ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ವಿಶೇಷ ವರದಿನರಗುಂದ: ಜಲಶಕ್ತಿ ಅಭಿಯಾನದ ಮಹತ್ವದ ಭಾಗವಾಗಿರುವ ಜಲಸಂಚಾಯಿ ಜನಭಾಗಿದಾರಿ 1.0 ಕಾರ್ಯಕ್ರಮದಲ್ಲಿ ಜಿಲ್ಲೆಯ ನರಗುಂದ ತಾಲೂಕು ಐತಿಹಾಸಿಕ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದೆ.
ಜಲ ಸಂರಕ್ಷಣೆ ಕಾಮಗಾರಿಗಳ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ನರಗುಂದ ತಾಲೂಕು ಪ್ರಥಮ ಸ್ಥಾನ ಗಳಿಸಿದ್ದು, ದೇಶದ 780 ಜಿಲ್ಲೆಗಳಲ್ಲಿ(ಝೋನ್ 3, ಕೆಟಗರಿ 3 ರಲ್ಲಿ) ಗದಗ ಜಿಲ್ಲೆ 4ನೇ ಸ್ಥಾನ ಪಡೆಯಲು ನರಗುಂದ ತಾಲೂಕು ಪ್ರಮುಖವಾದ ಕೊಡುಗೆ ನೀಡಿದೆ. ಈ ಮೂಲಕ ಗದಗ ಜಿಲ್ಲೆ ಕೇಂದ್ರದಿಂದ ₹25 ಲಕ್ಷ ನಗದು ಬಹುಮಾನಕ್ಕೆ ಭಾಜನವಾಗಿದೆ.ನೀರಿಗಾಗಿ ಒಂದಾಗಿ ಪ್ರತಿ ಹನಿ ನೀರನ್ನು ಸಂರಕ್ಷಿಸಿ ಎಂಬ ಧ್ಯೇಯದೊಂದಿಗೆ ಜಲಸಂಚಾಯಿ ಜನಭಾಗಿದಾರಿ 1.0 ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಮಳೆ ನೀರನ್ನು ಸಂಗ್ರಹಿಸುವುದು, ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಬೆಳೆಸುವುದು, ನೀರಿನ ಗುಣಮಟ್ಟವನ್ನು ಸುಧಾರಿಸುವುದು, ನೀರಿನ ಕೊರತೆಯ ಸವಾಲಿಗೆ ಸಮುದಾಯದ ಸಹಭಾಗಿತ್ವದೊಂದಿಗೆ ಸಮರ್ಥ ಪರಿಹಾರವನ್ನು ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿತ್ತು.ನರಗುಂದ ತಾಲೂಕಿನಿಂದ 4029 ಕಾಮಗಾರಿಗಳ ಮಾಹಿತಿಯನ್ನು ಜಲಸಂಚಾಯಿ ಜನಭಾಗಿದಾರಿ 1.0 ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಗದಗ ಜಿಲ್ಲೆಯಿಂದ ಒಟ್ಟು 11971 ಕಾಮಗಾರಿಗಳನ್ನು ಅಪ್‌ಲೋಡ್ ಮಾಡಲಾಗಿದ್ದು, ಅದರಲ್ಲಿ ಲಕ್ಷ್ಮೇಶ್ವರ- 353, ಮುಂಡರಗಿ- 1272, ರೋಣ- 2669, ಗಜೇಂದ್ರಗಡ- 74, ಶಿರಹಟ್ಟಿ- 45 ಹಾಗೂ ಗದಗ ತಾಲೂಕಿನಿಂದ 3529 ಜಲಸಂರಕ್ಷಣೆಯ ಕಾಮಗಾರಿಗಳ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗಿದೆ. ಈ ಮೂಲಕ ನರಗುಂದ ತಾಲೂಕಿನಿಂದ ಅತಿ ಹೆಚ್ಚು ಜಲಸಂರಕ್ಷಣೆಯ ಕಾಮಗಾರಿಗಳನ್ನು ಅನುಷ್ಠಾನ ಮಾಡಿ ಅವುಗಳ ಪೋಟೋಗಳನ್ನು ಅಪ್‌ಲೋಡ್ ಮಾಡುವುದರ ಮೂಲಕ ಗದಗ ಜಿಲ್ಲೆ ದೇಶದಲ್ಲೇ 4ನೇ ಸ್ಥಾನ ಮತ್ತು ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆಯಲು ನರಗುಂದ ತಾಲೂಕು ಪ್ರಮುಖ ಪಾತ್ರ ವಹಿಸಿದೆ.
2024ರ ಏ. 1ರಿಂದ 2025ರ ಮಾರ್ಚ್ 31ರ ವರೆಗಿನ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಮನರೇಗಾ) ಸೇರಿದಂತೆ ವಿವಿಧ ಯೋಜನೆಗಳಡಿ ಬೃಹತ್ ಜಲಕ್ರಾಂತಿಗೆ ನರಗುಂದ ತಾಲೂಕಿನಲ್ಲಿ ನಾಂದಿ ಹಾಡಲಾಯಿತು. ಈ ಅವಧಿಯಲ್ಲಿ ಒಟ್ಟು ತಾಲೂಕಿನಲ್ಲಿ 4029 ಜಲಸಂರಕ್ಷಣೆ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಜಲಸಂಚಾಯಿ ಪೋರ್ಟಲ್‌ನಲ್ಲಿ ದಾಖಲಿಸಲಾಯಿತು. ಮುಖ್ಯವಾಗಿ ವೈಯಕ್ತಿಕ ಮತ್ತು ಸಮುದಾಯ ಬದು ನಿರ್ಮಾಣ, ಮಳೆ ನೀರು ಕೊಯ್ಲು ಕಾಮಗಾರಿಗಳು, ಬೋರ್‌ವೆಲ್ ರಿಚಾರ್ಜ್, ಚೆಕ್ ಡ್ಯಾಂ ನಿರ್ಮಾಣದಂಥ ಕಾಮಗಾರಿಗಳು ಪ್ರಮುಖವಾಗಿವೆ.ಕೇಂದ್ರ ತಂಡದಿಂದ ಮನ್ನಣೆ: ನರಗುಂದ ತಾಲೂಕಿನ ಈ ಶ್ರಮಕ್ಕೆ ಕೇಂದ್ರ ತಂಡದಿಂದಲೂ ಮನ್ನಣೆ ದೊರೆತಿದೆ. ಕೇಂದ್ರ ನೋಡಲ್ ಅಧಿಕಾರಿಗಳು 2025ರ ಜೂನ್ 16ರಿಂದ 21ರ ವರೆಗೆ ಜಿಲ್ಲೆಯ ಎಲ್ಲ ತಾಲೂಕುಗಳ ಸ್ಥಳ ಪರಿಶೀಲನೆ, ದಾಖಲೆಗಳ ಪರಿಶೀಲನೆ ನಡೆಸಿದರು. ಈ ವೇಳೆ ನರಗುಂದ ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಕೈಗೊಂಡ ಜಲಸಂರಕ್ಷಣೆಯ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ಉನ್ನತ ಮಾನದಂಡಗಳನ್ನು ಪೂರೈಸಿರುವುದು ಖಚಿತಪಡಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದೆ ಗದಗ ಜಿಲ್ಲೆಗೆ ಈ ಪ್ರಶಸ್ತಿ ಬರಲು ಕಾರಣವಾಗಿದೆ.
ಸಂತಸ ತಂದಿದೆ: ಮಾನವ ದಿನಗಳ ಸೃಜನೆಯಲ್ಲಿ ಗದಗ ಜಿಲ್ಲೆಗೆ ನರಗುಂದ ತಾಲೂಕು ಪ್ರಥಮ ಸ್ಥಾನ ಪಡೆದಿದೆ. ನರೇಗಾ ಕೂಲಿಕಾರರ ಇ- ಕೆವೈಸಿ ಕಾರ್ಯದಲ್ಲೂ ನರಗುಂದ ತಾಲೂಕು ಪ್ರಥಮ ಸ್ಥಾನ ಪಡೆದಿದೆ. ಜತೆಗೆ ಸದ್ಯ ಜಲಸಂಚಾಯಿ ಜನಭಾಗಿದಾರಿ ಅಭಿಯಾನದಲ್ಲಿ ಗದಗ ಜಿಲ್ಲೆಗೆ ನರಗುಂದ ತಾಲೂಕು ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ ಎಂದು ತಾಪಂ ಇಒ ಎಸ್.ಕೆ. ಇನಾಮದಾರ ತಿಳಿಸಿದರು.ಪ್ರೋತ್ಸಾಹಕ: ನರಗುಂದ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಹಲವು ಪರಿಸರಸ್ನೇಹಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಕೇಂದ್ರ ಅಧ್ಯಯನ ತಂಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಹೀಗಾಗಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ನರಗುಂದ ತಾಲೂಕಿನ ಕೊಡುಗೆ ಅಪಾರ. ಜಿಲ್ಲೆಯಲ್ಲಿ ಪ್ರಥಮ ಸ್ಥಾನ ದೊರೆತಿರುವುದು ಮತ್ತಷ್ಟು ಕ್ರಿಯಾತ್ಮಕ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಪ್ರೋತ್ಸಾಹಕವಾಗಿದೆ ಎಂದು ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ ತಿಳಿಸಿದರು.