ಸಾರಾಂಶ
ನರಗುಂದ: ತಾಲೂಕಿನಲ್ಲಿ ಶುಕ್ರವಾರ ಅಬ್ಬರ ಮಳೆ ಸುರಿದಿದೆ. ಶನಿವಾರ ಬೆಣ್ಣೆಹಳ್ಳಕ್ಕೆ ಪ್ರವಾಹ ಬಂದು ನರಗುಂದ-ರೋಣ, ಗದುಗಿಗೆ ಹೋಗುವ ಒಳ ಮಾರ್ಗ ನರಗುಂದ-ಗದಗ ಹೋಗುವ ರಸ್ತೆಗಳು ಬಂದ್ ಆಗಿವೆ.
ಸೇತುವೆಗಳ ಮೇಲೆ ಪ್ರವಾಹ ನೀರು ಹರಿದಿದ್ದರಿಂದ ಶನಿವಾರ ಈ ಎರಡು ಮಾರ್ಗಗಳಿಗೆ ಹೋಗುವ ಬಸ್‌ಗಳು ಬಂದ್ ಆಗಿವೆ. ಈ ಮಾರ್ಗದಲ್ಲಿ ಪ್ರತಿ ದಿವಸ ಪ್ರಯಾಣ ಮಾಡುವ ಪ್ರಯಾಣಕರು ಪರದಾಟ ಮಾಡಬೇಕಾಯಿತು. ಈ ಮಾರ್ಗದಲ್ಲಿ ಹೋಗುವ ಪ್ರಯಾಣಿಕರು ನವಲಗುಂದ ಮಾರ್ಗವಾಗಿ ಹೋಗಲು ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ಪರಶುರಾಮ ಪ್ರಭಾಕರ ಹೇಳಿದರು.ರೈತನಿಗೆ ಗಾಯದ ಮೇಲೆ ಬರೆ: ತಾಲೂಕಿನ ಬೆಣ್ಣೆ ಹಳ್ಳಕ್ಕೆ ಹೊಂದಿಕೊಂಡಿರುವ ಗ್ರಾಮಗಳಾದ ಮೂಗನೂರ, ಬನಹಟ್ಟಿ, ಕುರ್ಲಗೇರಿ, ಸುರಕೋಡ, ಹದಲಿ, ಗಂಗಾಪುರ, ಖಾನಾಪುರ, ರಡ್ಡೇರನಾಗನೂರ ರೈತರು ಮುಂಗಾರು ಹಂಗಾಮಿನಲ್ಲಿ ತಮ್ಮ ಜಮೀನುಗಳಿಗೆ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ಈರಳ್ಳಿ ಸೇರಿದಂತೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ನಂತರ ಜುಲೈ ತಿಂಗಳಲ್ಲಿ ಇದೇ ರೀತಿ ಬೆಣ್ಣೆಹಳ್ಳಕ್ಕೆ ಅಬ್ಬರದ ಪ್ರವಾಹ ಬಂದು ರೈತ ಬಿತ್ತನೆ ಮಾಡಿದ ಎಲ್ಲಾ ಬೆಳೆಗಳು ಪ್ರವಾಹದ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿ ರೈತ ಸಾಕಷ್ಟು ನಷ್ಟ ಅನುಭವಿಸಿದ್ದನು. ನಂತರದ ದಿನಗಳಲ್ಲಿ ಮತ್ತೆ ಜಮೀನು ಉಳುಮೆ ಮಾಡಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ ರೈತರಿಗೆ ಮತ್ತೆ ಬೆಣ್ಣೆ ಹಳ್ಳಕ್ಕೆ ಪ್ರವಾಹ ಬಂದ ಈ ಬೆಳೆ ಕೂಡ ಪ್ರವಾಹಕ್ಕೆ ಹಾನಿಯಾಗಿದ್ದರಿಂದ ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಹಾಕಿದ ಹಾಗೆ ಆಗಿದೆ ಎಂದು ತಾಲೂಕಿನ ಕುರ್ಲಗೇರಿ ಗ್ರಾಮದ ರೈತ ಯಲ್ಲಪ್ಪ ಚಲವಣ್ಣವರ ಹೇಳಿದರು.
ಬಾರದ ಪರಿಹಾರ:ಹಿಂದಿನ ತಿಂಗಳ ಬೆಣ್ಣೆಹಳ್ಳಕ್ಕೆ ಪ್ರವಾಹ ಬಂದು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಪ್ರವಾಹದ ಅಬ್ಬರಕ್ಕೆ ನೂರಾರು ಹೆಕ್ಟೇರ್ ಹಾನಿಯಾಗಿದೆ. ಕೃಷಿ ಹಾಗೂ ಕಂದಾಯ ಇಲಾಖೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಹಾನಿ ಮಾಹಿತಿ ಕಳಿಸಿ 1 ತಿಂಗಳಾದರೂ ಕೂಡ ಸರ್ಕಾರ ಇವರಿಗೆ ಬೆಳೆ ಹಾನಿಯನ್ನು ಸರ್ಕಾರ ನೀಡಿಲ್ಲವೆಂದು ರೈತರು ಹೇಳಿದರು.