ಸಾರಾಂಶ
ಕಿಕ್ಕೇರಿ: ಮೈಸೂರು ಅರಸರ ಮಹಾರಾಣಿ ದೇವಿರಮ್ಮಣಿಯ ತವರೂರು ಹೋಬಳಿಯ ಮಾದಾಪುರ ಗ್ರಾಮದಲ್ಲಿ ಗ್ರಾಮದೇವತೆ ಕೆಂಕೇರಮ್ಮ ದೇವಿಗೆ ನರಕ ಚತುರ್ದಶಿಯಂದು ಗುರುವಾರ ವಿಶೇಷ ಪೂಜೆಗಳು ಜರುಗಿದವು. ದೀಪಾವಳಿ ಹಬ್ಬದ ಅಂಗವಾಗಿ ದೇವಿಯ ದೇಗುಲಕ್ಕೆ ವಿಪ್ರ ವೃಂದದವರು ತೆರಳಿ ದೇಗುಲವನ್ನು ತಳಿರು ತೋರಣ, ಪುಷ್ಪಗಳಿಂದ ಅಲಂಕರಿಸಿದರು. ಮಹಿಳೆಯರು ರಂಗೋಲಿಯ ಚಿತ್ತಾರ ಬಿಡಿಸಿ ಅಂದ ಹೆಚ್ಚಿಸಿದರು. ದೇಗುಲದ ಒಳ, ಹೊರಾಲಯವನ್ನು ಗೋಮಯ, ಗಂಧೋದಕ, ಪಂಚಗವ್ಯಗಳಿಂದ ಶುಚಿಗೊಳಿಸಿದರು. ವಿವಿಧ ಪರಿಮಳ ಪುಷ್ಪಗಳಿಂದ ಶೃಂಗರಿಸಿದರು. ಮೂಲದೇವಿ, ಉತ್ಸವ ಮೂರ್ತಿಗೆ ವಸ್ತ್ರಾಭರಣ ತೊಡಿಸಿದರು. ಕೆಂಕೇರಮ್ಮ ಚಾರಿಟೇಬಲ್ ಟ್ರಸ್ಟ್‌ನಿಂದ ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನಡೆಯಿತು. ಮಹಿಳೆಯರು ಲಲಿತಾ ಸಹಸ್ರನಾಮ ಪಠಿಸಿದರು. ಗಣಪತಿ ಹೋಮ, ನವಗ್ರಹ ಹೋಮ ಮತ್ತಿತರ ಹೋಮ ಹವನಾದಿಗಳು ಸಾಂಘವಾಗಿ ನಡೆದವು. ಗ್ರಾಮವಲ್ಲದೆ ಸುತ್ತಮುತ್ತಲ ಗ್ರಾಮ ಹಾಗೂ ಹೊರಗಡೆ ನೆಲೆಸಿರುವ ದೇವಿಯ ಭಕ್ತರು ಭಾಗವಹಿಸಿದ್ದರು. ವಿಪ್ರ ವೃಂದ ಸಮುದಾಯದಿಂದ ಸಾಮೂಹಿಕ ಭೋಜನ ವ್ಯವಸ್ಥೆ ಹಮ್ಮಿಕೊಳ್ಳಲಾಗಿತ್ತು. ಎಂ.ಎನ್. ಸುಬ್ರಹ್ಮಣ್ಯ, ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಎಂ.ಕೆ.ಶ್ರೀಕಂಠ, ಶಿವರಾಂ, ಸೋಮಣ್ಣ, ಗಣೇಶ, ನಾಗಾಜೀ, ಸುರೇಶ್, ರಘುನಾಥಶರ್ಮ, ಮೂರ್ತಿ, ಚಂದ್ರು, ಸೀತಾರಾಮ ಶಾಸ್ತ್ರೀ, ಚಂದ್ರು, ಶಂಕರ, ಗ್ರಾಮ ಮುಖಂಡರು ಹಾಜರಿದ್ದರು.