ನ್ಯಾರ್ಶಿ ಟು ನರಕ; ೨೫ ವರ್ಷವಾದ್ರೂ ಡಾಂಬರು ಕಾಣದ ರಸ್ತೆ

| Published : Sep 06 2024, 01:05 AM IST

ಸಾರಾಂಶ

ಸೊರಬ ತಾಲೂಕಿನ ನ್ಯಾರ್ಶಿ ಕ್ರಾಸ್‌ನಿಂದ ಆರಂಭವಾಗುವ ೧೧ ಕಿ.ಮೀ. ಸಂಪರ್ಕ ರಸ್ತೆ ಗುಂಡಿಗಳಿಂದ ಆವೃತ್ತವಾಗಿದ್ದು, ವಾಹನ ಸವಾರರಿಗೆ ನಿತ್ಯ ನರಕ ದರ್ಶನವಾಗುತ್ತಿದೆ.

- ಎಚ್.ಕೆ.ಬಿ.ಸ್ವಾಮಿ

ಕನ್ನಡಪ್ರಭ ವಾರ್ತೆ ಸೊರಬ

ವಾಹನ ಚಾಲನೆಯ ರಸ್ತೆಯಲ್ಲಿ ಗುಂಡಿಗಳು ಆಕ್ರಮಣ ಮಾಡಿಕೊಂಡಿರುವ ಡಾಂಬರು ರಸ್ತೆ ವಾಹನಗಳಷ್ಟೇ ಅಲ್ಲ ಕಾಲು ನಡುಗೆಗೂ ಯೋಗ್ಯವಲ್ಲದೇ ಯಮಧೂತವಾಗಿ ಪರಿಣಮಿಸಿದೆ.

ತಾಲೂಕಿನ ನ್ಯಾರ್ಶಿ ಸರ್ಕಲ್‌ನಿಂದ ಉತ್ತರ ಕನ್ನಡ ಜಿಲ್ಲೆ ಶಿರಸಿಗೆ ಸಂಪರ್ಕ ಕಲ್ಪಿಸುವ ಡಾಂಬರು ಒಳರಸ್ತೆ ನಿರ್ಮಾಣವಾಗಿ ಸುಮಾರು ೨೫ ವರ್ಷಗಳು ಸಂದಿವೆ. ಡಾಂಬರು ರಸ್ತೆ ನಿರ್ಮಾಣವಾಗಿ ೩-೪ ವರ್ಷಗಳಲ್ಲೇ ಗುಣಮಟ್ಟ ಕಾಯ್ದುಕೊಳ್ಳದೇ ಗುಂಡಿಗಳಿಂದ ಆವೃತ್ತವಾಗಿ ರಸ್ತೆ ಸಂಚಾರಕ್ಕೆ ಅಡೆತಡೆ ಮಾಡಿದೆ. ಗುಂಡಿ ತಪ್ಪಿಸಿ ರಸ್ತೆ ಹುಡುಕಿ ಸಾಗುವ ವಾಹನ ಸವಾರರು ಹೈರಾಣಾಗಿ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿ ತೆರಳುವಷ್ಟು ರಸ್ತೆ ಹದಗೆಟ್ಟಿದೆ ಎಂದು ನ್ಯಾರ್ಶಿ ಗ್ರಾಮಸ್ಥರು ಕಿಡಿಕಾರುತ್ತಾರೆ.

ನ್ಯಾರ್ಶಿ ಗ್ರಾ.ಪಂ. ವ್ಯಾಪ್ತಿಯ ಮಣ್ಣತ್ತಿ, ಸಂಬಾಪುರ, ಚನ್ನಪಟ್ಟಣ, ಪುರದೂರು ಮಾರ್ಗವಾಗಿ ಮೂಡದೀವಳಿಗೆ, ಕಮರೂರು ಮೊದಲಾದ ಗ್ರಾಮಗಳಿಗೆ ಸಂಪರ್ಕಿಸಲು ೧೦ ಕಿ.ಮೀ. ಕ್ರಮಿಸಬೇಕಿದೆ. ನ್ಯಾರ್ಶಿ ಕ್ರಾಸ್‌ನಿಂದ ಆರಂಭವಾಗುವ ಈ ಮಾರ್ಗದ ೧೦ ಕಿ.ಮೀ. ದೂರ ಸಾಗಿದರೂ ಸಪಾಟು ರಸ್ತೆಯೇ ಸಿಗುವುದಿಲ್ಲ. ಗುಂಡಿ-ಗೊಟರುಗಳೇ ಆವರಿಸಿವೆ, ಅಲ್ಲದೇ ಹರೀಶಿ ಗ್ರಾ.ಪಂ. ಸೇರಿದಂತೆ ಸುಮಾರು ೨೦ಕ್ಕೂ ಅಧಿಕ ಗ್ರಾಮಗಳ ರೈತರು ಮತ್ತು ಗ್ರಾಮಸ್ಥರು ಇದೇ ಮಾರ್ಗವಾಗಿ ಸೊರಬ ಮತ್ತು ಉತ್ತರಕನ್ನಡ ಜಿಲ್ಲೆಯ ಶಿರಸಿಗೆ ತಮ್ಮ ವಾಣಿಜ್ಯ ವ್ಯವಹಾರ, ಸರ್ಕಾರಿ ಕಛೇರಿ ಮತ್ತು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಬಸ್ ಮತ್ತು ದ್ವಿಚಕ್ರ ವಾಹನದಲ್ಲಿ ತೆರಳಬೇಕಿದೆ.

ಇದಲ್ಲದೇ ಉತ್ತರ ಕನ್ನಡ ಜಿಲ್ಲೆಯ ಶ್ರೀ ರೇಣುಕಾಂಬೆಯ ಭಕ್ತರು ವಾರದ ಮಂಗಳವಾರ, ಶುಕ್ರವಾರ ಮತ್ತು ತಿಂಗಳಿನ ಹುಣ್ಣಿಮೆ, ಜಾತ್ರಾ ಸಮಯದಲ್ಲಿ ದೇವಿಯ ದರ್ಶನಕ್ಕೆ ಚಂದ್ರಗುತ್ತಿ ಗ್ರಾಮಕ್ಕೆ ಇದೇ ಮಾರ್ಗವಾಗಿ ಆಗಮಿಸಬೇಕಿದೆ. ಇನ್ನು, ಪ್ರತೀ ದಿನ ೪ ರಿಂದ ೫ ದ್ವಿಚಕ್ರ ವಾಹನಗಳ ಅಪಘಾತ ಸಂಭವಿಸುವುದು ಮಾಮೂಲಾಗಿದೆ. ಹಾಗಾಗಿ ಮನೆ ಬಿಟ್ಟು ಎಲ್ಲಿಯೂ ಹೋಗದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಳೆದ ೨೫ ವರ್ಷಗಳ ಹಿಂದೆ ನಿರ್ಮಾಣವಾದ ಡಾಂಬರು ರಸ್ತೆ ಇದುವರೆವಿಗೂ ಮರು ಡಾಂಬರೀಕರಣ ಕಂಡಿಲ್ಲ. ನಿರ್ಮಾಣ ವಾಗಿ ೩ ವರ್ಷಗಳಲ್ಲೇ ಲೋಕೋಪಯೋಗಿ ಇಲಾಖೆ ಗುಂಡಿ ಬಿದ್ದ ರಸ್ತೆಗೆ ಆಗಾಗ್ಗೆ ಬರಿಯ ಮಣ್ಣು-ಜಲ್ಲಿ ಹಾಕಿ ಗುಂಡಿ ಮುಚ್ಚು ಕೆಲಸ ಮಾಡಿದ್ದಾರೆ. ಆದರೆ ಕಳೆದ ಐದು ವರ್ಷಗಳಿಂದ ರಸ್ತೆಯನ್ನೇ ಆಕ್ರಮಿಸಿಕೊಂಡಿರುವ ಗುಂಡಿಗಳನ್ನು ಮುಚ್ಚುವ ಕೆಲಸ ವೂ ಆಗಿಲ್ಲ. ಅತ್ತ ಶಾಸಕರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ದುರ್ಗಮ ರಸ್ತೆಗೆ ಡಾಂಬರೀಕರಣ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಸುಮಾರು ೨೦ ಗ್ರಾಮಗಳ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಬೆನ್ನೂರು, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಬಸವರಾಜಗೌಡ ಮಾತನಾಡಿ, ನ್ಯಾರ್ಶಿ ಕ್ರಾಸ್‌ನಿಂದ ೧೧ ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಗುಂಡಿಗಳಿಂದ ಕೂಡಿದ ರಸ್ತೆ ಸಂಚಾರಕ್ಕೆ ಯೋಗ್ಯತೆ ಕಳೆದುಕೊಳ್ಳುತ್ತದೆ. ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಓಡಾಡುವ ದ್ವಿಚಕ್ರ ವಾಹನ, ಬಸ್ಸು, ಕ್ಯಾಂಟರ್, ಟ್ರ್ಯಾಕ್ಟರ್‌ಗೆ ಚಾಲಕರು ಯಾತನೆ ಪಡುವಂತಾಗಿದೆ. ಗುಂಡಿ ತಪ್ಪಿಸಲು ಹೋಗಿ ಅಪಘಾತಗಳು ದಿನನಿತ್ಯ ನಡೆಯುತ್ತವೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. -

ನ್ಯಾರ್ಶಿ ಗ್ರಾ.ಪಂ. ಅಧ್ಯಕ್ಷ ಧನಂಜಯ ನಾಯ್ಕ ಮಾತನಾಡಿ, ಕಳೆದ ೨೫ ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಇಂದ ನಿರ್ಮಾಣಗೊಂಡ ೧೧ ಕಿ.ಮೀ. ರಸ್ತೆ ಕಳಪೆ ಗುಣಮಟ್ಟ ದಿಂದ ಕೇವಲ ಒಂದೆರಡು ವರ್ಷದಲ್ಲಿಯೇ ಹಾಳಾಗಿ ಗುಂಡಿಗಳಿಂದ ಆವೃತ್ತವಾಗಿದೆ. ಇತ್ತೀಚೆಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೂ ತರಲಾಗಿದೆ. ಡಾಂಬರೀಕರಣ ಮಾಡುವ ಭರವಸೆ ನೀಡಿದ್ದಾರೆ ಎಂದರು.