ನರಸಿಂಹರಾಜಪುರ: ಈ ವರ್ಷ ವಾಡಿಕೆಗಿಂತ 376 ಮಿಮೀ ಮಳೆ ಜಾಸ್ತಿ

| Published : Jul 17 2025, 12:30 AM IST

ನರಸಿಂಹರಾಜಪುರ: ಈ ವರ್ಷ ವಾಡಿಕೆಗಿಂತ 376 ಮಿಮೀ ಮಳೆ ಜಾಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ತಾಲೂಕಿನಲ್ಲಿ ಜನವರಿಯಿಂದ ಜು.16 ರ ವರೆಗೆ 659 ಮಿ.ಮೀ. ವಾಡಿಕೆ ಮಳೆ ಬೀಳಬೇಕಾಗಿತ್ತು.ಆದರೆ, ಇಲ್ಲಿಯವರೆಗೆ 1035 ಮಿ.ಮೀ. ಮಳೆ ಸುರಿದಿದ್ದು ವಾಡಿಕೆಗಿಂತ 376 ಮಿ.ಮೀ.( 15 ಇಂಚು) ಮಳೆ ಜಾಸ್ತಿ ಸುರಿದಿದೆ.

- ಭತ್ತದ ಕೃಷಿ ಬಗ್ಗೆ ರೈತರಿಂದ ನಿರಾಸಕ್ತಿ । ಶೇ 5 ರಷ್ಟು ಮಾತ್ರ ನಾಟೀ ಕಾರ್ಯ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನಲ್ಲಿ ಜನವರಿಯಿಂದ ಜು.16 ರ ವರೆಗೆ 659 ಮಿ.ಮೀ. ವಾಡಿಕೆ ಮಳೆ ಬೀಳಬೇಕಾಗಿತ್ತು.ಆದರೆ, ಇಲ್ಲಿಯವರೆಗೆ 1035 ಮಿ.ಮೀ. ಮಳೆ ಸುರಿದಿದ್ದು ವಾಡಿಕೆಗಿಂತ 376 ಮಿ.ಮೀ.( 15 ಇಂಚು) ಮಳೆ ಜಾಸ್ತಿ ಸುರಿದಿದೆ.

ಕಸಬಾ ಹೋಬಳಿಯಲ್ಲಿ 659 ಮಿ.ಮೀ. ವಾಡಿಕೆ ಮಳೆ ಬೀಳಬೇಕಾಗಿತ್ತು. 895 ಮಿ.ಮೀ. ಸುರಿದಿದೆ. 236 ಮಿ.ಮೀ. ಮಳೆ ಜಾಸ್ತಿಯಾಗಿದೆ. ಬಾಳೆಹೊನ್ನೂರು ಹೋಬಳಿಯಲ್ಲಿ 1082 ಮಿ.ಮೀ. ವಾಡಿಕೆ ಮಳೆ ಬೀಳಬೇಕಾಗಿದ್ದು 1201 ಮಿ.ಮೀ. ಬಿದ್ದಿದ್ದು 119 ಮಿ.ಮೀ. ಮಳೆ ಜಾಸ್ತಿಯಾಗಿದೆ. ಈ ವರ್ಷ ಜೂ.10 ಕ್ಕೆ ಪ್ರಾರಂಭವಾಗಬೇಕಾಗಿದ್ದ ಮುಂಗಾರು ಮೇ. 20 ಕ್ಕೆ ಪ್ರಾರಂಭವಾಗಿದೆ. ಏಪ್ರಿಲ್, ಮೇ ತಿಂಗಳಲ್ಲೂ ಸಾಕಷ್ಟು ಮಳೆ ಬಿದ್ದಿರುವುದರಿಂದ ಮಾಮೂಲು ಮಳೆಗಿಂತ ಜಾಸ್ತಿಯಾಗಿದೆ. ಆದರೆ, ಒಂದೇ ದಿನ ಬಾರೀ ಮಳೆ ಸುರಿದಿಲ್ಲ. ಹಳ್ಳಗಳು ಉಕ್ಕೇರಿಸುವ ಮಳೆ ಬಂದಿಲ್ಲ. ಯಾವುದೇ ರಸ್ತೆಯ ಮೇಲೆ ನೀರು ಬಂದಿಲ್ಲ. ಸಣ್ಣ ಮಳೆಯೇ ಜಾಸ್ತಿ ಬರುತ್ತಿದೆ. ಮಧ್ಯೆ, ಮಧ್ಯೆ ಮಳೆ ಬಿಡುವು ಸಹ ನೀಡುತ್ತಿರುವುದರಿಂದ ಅಡಕೆ ತೋಟಗಳಿಗೆ ಕೊಳೆ ರೋಗ ಬಾರದಂತೆ ಬೋರ್ಡೋ ಮಿಶ್ರಣ ಸಿಂಪರಣೆಗೆ ಅನುಕೂಲವಾಗಿದೆ.

ಬಿತ್ತನೆ ಬೀಜ ಖರೀದಿ: ರೈತರು ಭತ್ತದ ಸಸಿ ಮುಡಿಗಾಗಿ ಕೃಷಿ ಇಲಾಖೆಯಲ್ಲಿ ಇದುವರೆಗೆ 163 ಕ್ವಿಂಟಾಲ್ ಬಿತ್ತನೆ ಬೀಜ ಖರೀದಿಸಿದ್ದಾರೆ. ಇದರಲ್ಲಿ ಕೆಎಚ್.ಪಿ11 - 60 ಕ್ವಿಂಟಾಲ್, ತುಂಗಾ- 30 ಕ್ವಿಂಟಾಲ್, 1001- 10 ಕ್ವಿಂಟಾಲ್, ಜಯ -10 ಕ್ವಿಂಟಾಲ್, ಜ್ಯೋತಿ 13 ಕ್ವಿಂಟಾಲ್, ಉಮಾ 40 ಕ್ವಿಂಟಾಲ್ ಖರೀದಿಸಿದ್ದಾರೆ.

-- ಬಾಕ್ಸ್--

ಭತ್ತದ ಧಾರಣೆ ಕುಸಿತ, ಕೃಷಿ ಕೂಲಿ ಕಾರ್ಮಿಕರ ಸಂಬಳ ಜಾಸ್ತಿ ಹಾಗೂ ಅಡಕೆ ಬೆಳೆ ಬೆಲೆ ಏರಿಕೆಯಿಂದ ಬಹುತೇಕ ರೈತರು ಭತ್ತದ ಕೃಷಿ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ. ತಾಲೂಕಿನಲ್ಲಿ ಬಹಳ ವರ್ಷಗಳ ಹಿಂದೆ 7 ಸಾವಿರ ಎಕ್ರೆಯಲ್ಲಿ ಭತ್ತ ಬೆಳೆಯುತ್ತಿದ್ದರು. ನಂತರ ಭತ್ತದ ಗದ್ದೆಯಲ್ಲಿ ಅಡಕೆ ತೋಟ ಜಾಸ್ತಿಯಾಗುತ್ತಾ ಬಂದು ಪ್ರಸ್ತುತ 5 ಸಾವಿರ ಭತ್ತದ ಗದ್ದೆ ಮಾತ್ರ ಉಳಿದಿದೆ. ಆದರೆ, ಈ ವರ್ಷ ರೈತರು ವಾಣಿಜ್ಯ ಭತ್ತದ ಗದ್ದೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಕೆ ಸಸಿ, ಶುಂಠಿ ಗಳನ್ನು ಮತ್ತೆ ಜಾಸ್ತಿ ಪ್ರಮಾಣದಲ್ಲಿ ನೆಡುತ್ತಿರುವುದರಿಂದ ಭತ್ತ ಬೆಳೆಯುವ ರೈತರ ಸಂಖ್ಯೆ ಮತ್ತಷ್ಟು ಕುಸಿಯುತ್ತಿದೆ. ಉಳಿದ ಭತ್ತದ ಗದ್ದೆಗಳಲ್ಲಿ ರೈತರು ಭತ್ತದ ಸಸಿ ಮುಡಿ ತಯಾರಿಸುವ ಕೆಲ ಮುಗಿದಿದ್ದು ಅಲ್ಲಲ್ಲಿ ಕೆಲವು ರೈತರು ಮಾತ್ರ ನಾಟೀ ಕಾರ್ಯ ಪ್ರಾರಂಭಿಸಿದ್ದಾರೆ.