ನರಸಿಂಹರಾಜಪುರ ಭಾರೀ ಮಳೆ: ಮನೆ ಕುಸಿತ

| Published : Jul 16 2024, 12:30 AM IST

ಸಾರಾಂಶ

ನರಸಿಂಹರಾಜಪುರದಿಂದ ರಾವೂರು ಮೀನು ಕ್ಯಾಂಪಿಗೆ ಹೋಗುವ ರಸ್ತೆಗೆ ಅಡ್ಡಲಾಗಿ ಭಾರೀ ಗಾತ್ರದ ಹೊನ್ನೇ ಮರ ಬಿದ್ದು ಕೆಲವು ಸಮಯ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು

ನರಸಿಂಹರಾಜಪುರ:

ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೂ ಭಾರೀ ಮಳೆ ಸುರಿದಿದ್ದು ಹಳ್ಳಗಳೆಲ್ಲಾ ಉಕ್ಕಿ ಹರಿದಿದೆ.

ಭಾನುವಾರ ರಾತ್ರಿ ಹಿಳುವಳ್ಳಿ ಗ್ರಾಮದ ಜೈಲ್ ರಸ್ತೆಯಲ್ಲಿ ಮುನಿಸ್ವಾಮಿ ಎಂಬವರ ಗುಡಿಸಲು ಉರುಳಿ ಬಿದ್ದಿದೆ. ಆ ಸಂದರ್ಭದಲ್ಲಿ ಮನೆ ಒಳಗೆ ಇದ್ದ ಮುನಿಸ್ವಾಮಿ ಪತ್ನಿ ಭುಜಕ್ಕೆ ಪೆಟ್ಟಾಗಿದ್ದು, ಮುನಿಸ್ವಾಮಿ ಹಾಗೂ ಮೊಮ್ಮಕ್ಕಳು ಮನೆ ಒಳಗೆ ಇರಲಿಲ್ಲ. ಇದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ನಾಗಲಾಪುರ ಗ್ರಾಮ ಪಂಚಾಯಿತಿ ಪಿಡಿಒ ಪ್ರೇಂ ಕುಮಾರ್, ರೆವಿನ್ಯೂ ಇನ್ಸಪೆಕ್ಟರ್ ಮಂಜುನಾಥ್, ಗ್ರಾಮ ಆಡಳಿತಾಧಿಕಾರಿ ಸಾನಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನರಸಿಂಹರಾಜಪುರದಿಂದ ರಾವೂರು ಮೀನು ಕ್ಯಾಂಪಿಗೆ ಹೋಗುವ ರಸ್ತೆಗೆ ಅಡ್ಡಲಾಗಿ ಭಾರೀ ಗಾತ್ರದ ಹೊನ್ನೇ ಮರ ಬಿದ್ದು ಕೆಲವು ಸಮಯ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಸುದ್ದಿ ತಿಳಿದ ಕೂಡಲೇ ಉಪ ವಲಯ ಅರಣ್ಯಾಧಿಕಾರಿ ಗೌಸ್ ಮಹಿಯುದ್ದೀನ್, ಅರುಣ ಬಾರಂಗಿ, ಅರಣ್ಯ ರಕ್ಷಕ ಪ್ರವೀಣ್ ಬೇಟಿ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗ್ರಾಮೀಣ ಪ್ರದೇಶದಲ್ಲಿ ಮಳೆಯಿಂದಾಗಿ ಭಾನುವಾರದಿಂದಲೇ ವಿದ್ಯುತ್ ಸ್ಥಗಿತಗೊಂಡಿದೆ. ಗಾಳಿಯಿಂದಾಗಿ ಅಲ್ಲಲ್ಲಿ ಮರ ಉರುಳಿ ಬೀಳುತ್ತಿದೆ. ಬಿಡುವಿಲ್ಲದಂತೆ ಮಳೆ ಸುರಿಯುತ್ತಿರುವುದರಿಂದ ಹಳ್ಳಗಳು ಉಕ್ಕೇರಿ ಹರಿಯುತ್ತಿದೆ.