ಸಾರಾಂಶ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಮಧ್ಯಾಹ್ನ 2 ರಿಂದ 3 ಗಂಟೆವರೆಗೆ ಗುಡುಗು, ಗಾಳಿ ಸಹಿತ ಈ ವರ್ಷದ ಮೊದಲ ಮಳೆ ಸುರಿದಿದ್ದು ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತುಸು ನೆಮ್ಮದಿ ತಂದಿದೆ.
- ಕಾನೂರು ಗ್ರಾಮದಲ್ಲಿ ಗಾಳಿಗೆ ಮನೆ ಮೇಲೆ ಉರುಳಿದ ಮರ । ಬಸವಳಿದಿದ್ದ ಜನರಿಗೆ ತುಸು ನೆಮ್ಮದಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಮಧ್ಯಾಹ್ನ 2 ರಿಂದ 3 ಗಂಟೆವರೆಗೆ ಗುಡುಗು, ಗಾಳಿ ಸಹಿತ ಈ ವರ್ಷದ ಮೊದಲ ಮಳೆ ಸುರಿದಿದ್ದು ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತುಸು ನೆಮ್ಮದಿ ತಂದಿದೆ.
ತಾಲೂಕಿನ ಕಾನೂರು ಗ್ರಾಮದಲ್ಲಿ ಗುಡುಗು, ಗಾಳಿಯ ಸಹಿತ 1 ಗಂಟೆ ಮಳೆ ಸುರಿದಿದ್ದು ಲೀಲಾ ಭಾಸ್ಕರ್ ಎಂಬುವರ ಮನೆಯ ಮೇಲೆ ಮರ ಉರುಳಿ ಬಿದ್ದಿದೆ. ಇದರಿಂದ ಮೇಲ್ಚಾವಣಿ ಹಾಳಾಗಿದ್ದು ನಷ್ಟ ಉಂಟಾಗಿದೆ. ಬೇರೆ ಅಪಾಯ ಆಗಿಲ್ಲ. ಗಾಳಿಯ ಹೊಡೆತಕ್ಕೆ ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಮರ ಕೊಂಬೆ ಉರುಳಿ ಬಿದ್ದಿದೆ. ಹಾಗಾಗಿ ವಿದ್ಯುತ್ ವ್ಯವಸ್ಥೆಯಲ್ಲಿ ಏರು ಪೇರು ಉಂಟಾಗಿದೆ. ತಾಲೂಕಿನ ಮುತ್ತಿನಕೊಪ್ಪ, ಶೆಟ್ಟಿಕೊಪ್ಪ, ಸಿಂಸೆ, ಕೈಮರ, ಹೊನ್ನೇಕೊಡಿಗೆ, ಸೀತೂರು, ಕುದುರೆಗುಂಡಿ ಭಾಗದಲ್ಲೂ 1 ಗಂಟೆ ಮಳೆ ಸುರಿದಿದೆ. ನರಸಿಂಹರಾಜಪುರ ಪಟ್ಟಣದಲ್ಲಿ ಮಾತ್ರ ಅರ್ಧ ಗಂಟೆ ಸಾಧಾರಣ ಮಳೆ ಬಂದಿದೆ.ಈ ವರ್ಷ ಬೇಸಿಗೆ ಪ್ರಾರಂಭದಲ್ಲೇ ಉಷ್ಣಾಂಶ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದ್ದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ಮನೆಯಿಂದ ಹೊರಗೆ ಬರುವುದೇ ದುಸ್ಥರವಾಗುವ ಸಂದರ್ಭ ಉಂಟಾಗಿತ್ತು. ಒಂದು ಮಳೆ ಬರಲಿ ಎಂದು ಹಲವರು ದೇವರಲ್ಲಿ ವಿಶೇಷ ಪೂಜೆ ಮಾಡಿಸಿದ್ದರು.
ಕಳೆದ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಅಂತರ್ಜಲ ಸಹ ಕುಸಿದಿದೆ. ಹಲವಾರು ಕುಡಿಯುವ ನೀರಿನ ಕೊಳವೆ ಬಾವಿಗಳು ತಳ ಕಂಡಿದೆ. ಅನೇಕ ಅಡಕೆ ತೋಟಗಳಿಗೆ ನೀರಿಲ್ಲದೆ ಒಣಗಲು ಪ್ರಾರಂಭವಾಗಿ ರೈತರು ಗಾಬರಿ ಯಾಗಿದ್ದರು. ಕಳೆದ 1 ವಾರದಿಂದ ಮೋಡ ಬರುತ್ತಿದ್ದು ಮಳೆ ಬರಬಹುದು ಎಂಬುದು ರೈತರ ಲೆಕ್ಕಾಚಾರವಾಗಿತ್ತು.ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ಏಪ್ರಿಲ್ 1 ರ ನಂತರವೇ ಅಡ್ಡ ಮಳೆ ಸುರಿಯುವುದು ವಾಡಿಕೆಯಾಗಿದೆ. ಆದರೆ, ಪಶ್ಚಿಮ ಘಟ್ಟವಾದ ಬಾಳೆಹೊನ್ನೂರು, ಕಳಸ, ಬಸರಿಕಟ್ಟೆ, ಜಯಪುರ ಭಾಗದಲ್ಲಿ ಮಾರ್ಚ್ ತಿಂಗಳಲ್ಲೂ ಮಳೆ ಬರುತ್ತದೆ.
ತಾಲೂಕಿನ ಭದ್ರಾ ಹಿನ್ನೀರು ಸಹ ಕಡಿಮೆಯಾಗಿದೆ. ಹಲವು ಹಳ್ಳಗಳು ಸಹ ಜನವರಿ ತಿಂಗಳಲ್ಲೇ ನಿಂತು ಹೋಗಿದೆ. ಈಗ ಬಂದಿರುವ ಮಳೆ ರೈತರಿಗೆ ಖುಷಿ ತಂದಿದೆ. ಆದರೆ, ಒಂದು ಮಳೆ ಬಂದು ಹೋಗಿ ಮತ್ತೆ ತಿಂಗಳುಗಟ್ಟಳೆ ಬರದಿದ್ದರೆ ಇದ್ದ ನೀರು ಆವಿಯಾಗಿ ಹೋಗುತ್ತದೆ ಎಂಬುದು ರೈತರ ಅನಿಸಿಕೆಯಾಗಿದೆ. ವಾರದ ಒಳಗೆ ಇದೇ ರೀತಿ ಇನ್ನೊಂದು ಮಳೆ ಬರಲಿ ಎಂಬುದೇ ದೇವರಲ್ಲಿ ರೈತರ ಪ್ರಾರ್ಥನೆಯಾಗಿದೆ.--ಬಾಕ್ಸ್--
ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನಲ್ಲಿ ಶುಕ್ರವಾರ ಗುಡುಗು ಸಹಿತ ಮಳೆಯಾಗಿದೆ.ಚಿಕ್ಕಮಗಳೂರು, ಎನ್.ಆರ್.ಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಮಳೆ ಬಂದಿದ್ದು, ತರೀಕೆರೆ ಹಾಗೂ ಕಡೂರು ಸೇರಿದಂತೆ ಕೆಲವು ತಾಲೂಕುಗಳಲ್ಲಿ ಬೆಳಿಗ್ಗೆ ಬಿಸಿಲು ಸಂಜೆಯ ನಂತರ ಮೋಡ ಕವಿದ ವಾತಾವರಣ ಇತ್ತು.ಎನ್.ಆರ್.ಪುರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಮಧ್ಯಾಹ್ನ ಗುಡುಗು ಸಹಿತ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಬಂದಿತು. ಇಲ್ಲಿನ ಬಿ.ಎಚ್. ಕೈಮರ, ಹೊನ್ನೆಕೊಡುಗೆ, ಕಾನೂರು, ಸೀತೂರು ಭಾಗದಲ್ಲಿ ಭಾರೀ ಗಾಳಿಗೆ ಮರಗಳು ಬಿದ್ದು ಕೆಲವೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು. ಕಾನೂರು ಗ್ರಾಮದ ಲೀಲಾ ಭಾಸ್ಕರ್ ಅವರ ಮನೆಯ ಮೇಲೆ ಮರ ಬಿದ್ದು ಮೇಲ್ಚಾವಣಿಗೆ ಹಾನಿಯಾಗಿದೆ. ಸಂಜೆ ನಂತರ ಮಳೆ ಬಿಡುವು ನೀಡಿತು.ಹಲವು ದಿನಗಳಿಂದ ಬಾಳೆಹೊನ್ನೂರು ಸುತ್ತಮುತ್ತ ಮಳೆಯಾಗುತ್ತಿದ್ದು, ಶುಕ್ರವಾರವೂ ಕೂಡ ಮಧ್ಯಾಹ್ನದ ನಂತರ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯಿತು. ಕೊಪ್ಪ ಪಟ್ಟಣದಲ್ಲಿ ಮಧ್ಯಾಹ್ನ 2.30ರ ವೇಳೆಗೆ ಮೋಡ ಕವಿದ ವಾತಾವರಣ, ಗುಡುಗು ಸಿಡಿಲಿನ ಅಬ್ಬರ ಇದ್ದು, 3 ಗಂಟೆ ವೇಳೆಗೆ 10 ನಿಮಿಷಗಳ ಕಾಲ ಮಳೆ ಬಂದಿತು. ಶೃಂಗೇರಿ ಪಟ್ಟಣ ಸೇರಿದಂತೆ ನೆಮ್ಮಾರು, ಕೆರೆಕಟ್ಟೆಗಳಲ್ಲಿ ಗುಡುಗು ಸಹಿತ ಧಾರಾಕಾರವಾಗಿ ಮಳೆ ಬಂದಿತು.ಚಿಕ್ಕಮಗಳೂರು ತಾಲೂಕಿನ ಗಿರಿ ಭಾಗದಲ್ಲಿ ಮಧ್ಯಾಹ್ನದ ನಂತರ ಮಳೆ ಬಂದಿತು. ಆದರೆ, ನಗರದ ಕೆಲವೆಡೆ ಕೆಲವೇ ಸಮಯ ಮಳೆ ಬಂದು ನಂತರ ಬಿಡುವು ನೀಡಿತು. ಎಂದಿನಂತೆ ಸಂಜೆ ಬಿಸಿಲಿತ್ತು.---
ಶೃಂಗೇರಿಯಲ್ಲಿ ಅಬ್ಬರಿಸಿದ ವರುಣಶೃಂಗೇರಿ: ತಾಲೂಕಿನಲ್ಲಿ ಶುಕ್ರವಾರ ಮಧ್ಯಾಹ್ನ ಗುಡುಗು ಸಹಿತ ಕೆಲ ಹೊತ್ತು ಉತ್ತಮ ಮಳೆ ಸುರಿಯಿತು. ಬೆಳಿಗ್ಗೆಯಿಂದ ಆಗಾಗ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಯಲ್ಲಿ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಕೆಲ ಹೊತ್ತು ಉತ್ತಮ ಮಳೆ ಸುರಿಯಿತು.ಶೃಂಗೇರಿ ಪಟ್ಟಣದಲ್ಲಿ ಗುಡುಗು ಸಹಿತ ಕೆಲ ಹೊತ್ತು ಭಾರೀ ಮಳೆ ಸುರಿಯಿತು. ಅಡ್ಡಗೆದ್ದೆ, ಮೆಣಸೆ, ಕೂತಗೋಡು,ಮರ್ಕಲ್,ಬೇಗಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲ ಹೊತ್ತು ಉತ್ತಮ ಮಳೆ ಸುರಿಯಿತು. ಕೆರೆಕಟ್ಟೆ, ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಿಡಿಲಿನ ಆರ್ಭಟ ಜೋರಾಗಿದ್ದು, ಸಾಧಾರಣ ಮಳೆ ಸುರಿಯಿತು. ಸಂಜೆಯವರೆಗೂ ಕೆಲವೆಡೆ ತುಂತುರು ಮಳೆ, ಗುಡುಗು ಸಿಡಿಲಿನ ಆರ್ಭಟ ಮುಂದುವರೆದಿತ್ತು.