ನರಸಿಂಹರಾಜಪುರ ಪಟ್ಟಣ ಪಂಚಾಯಿತಿ 2024- 25 ನೇ ಸಾಲಿನ ಆಯವ್ಯಯ ಮಂಡನೆ

| Published : Feb 07 2024, 01:52 AM IST

ಸಾರಾಂಶ

2024–25ನೇ ಸಾಲಿನ ಆಯವ್ಯಯ ಮಂಡಿಸಿದ ಆಡಳಿತಾಧಿಕಾರಿ ತನುಜ ಟಿ.ಸವದತ್ತಿ ಪ್ರಾರಂಭಿಕ ಶಿಲ್ಕು 1 ಕೋಟಿ ಸೇರಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ಮೂಲಗಳಿಂದ ಒಟ್ಟು 576 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಅದೇ ರೀತಿ ವಿವಿಧ ಮೂಲಗಳ ಮೇಲೆ ಒಟ್ಟು 524 ಲಕ್ಷ ವೆಚ್ಚ ನಿರೀಕ್ಷಿಸಲಾಗಿದ್ದು ಒಟ್ಟು 52 ಲಕ್ಷ ಉಳಿತಾಯವಾಗಬಹುದೆಂದು ಅಂದಾಜಿಸಿರುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

2024–25ನೇ ಸಾಲಿನ ಆಯವ್ಯಯ ಮಂಡಿಸಿದ ಆಡಳಿತಾಧಿಕಾರಿ ತನುಜ ಟಿ.ಸವದತ್ತಿ ಪ್ರಾರಂಭಿಕ ಶಿಲ್ಕು 1 ಕೋಟಿ ಸೇರಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ಮೂಲಗಳಿಂದ ಒಟ್ಟು 576 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಅದೇ ರೀತಿ ವಿವಿಧ ಮೂಲಗಳ ಮೇಲೆ ಒಟ್ಟು 524 ಲಕ್ಷ ವೆಚ್ಚ ನಿರೀಕ್ಷಿಸಲಾಗಿದ್ದು ಒಟ್ಟು 52 ಲಕ್ಷ ಉಳಿತಾಯವಾಗಬಹುದೆಂದು ಅಂದಾಜಿಸಿರುವುದಾಗಿ ತಿಳಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ 2024–25ನೇ ಸಾಲಿನ ಆಯವ್ಯಯ ಮಂಡಿಸಿ, ವಾಣಿಜ್ಯ ಮಳಿಗೆ ಹಾಗೂ ನೆಲಬಾಡಿಗೆ ಇತರೆ ಜಮೆ, ಆಸ್ತಿತೆರಿಗೆ, ನಿವೇಶನ ಮಾರಾಟ, ನೀರಿನ ತೆರಿಗೆಯಿಂದ 1.88 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಸರ್ಕಾರದ ಎಸ್ ಎಫ್ ಸಿ ಮುಕ್ತನಿಧಿ, ಎಸ್ ಎಫ್ ಸಿ ವಿಶೇಷ ಅನುದಾನ, 15ನೇ ಹಣಕಾಸು ಯೋಜನೆ ಅನುದಾನ, ಆಶ್ರಯ ಯೋಜನೆ ಅನುದಾನ, ಕುಡಿಯುವ ನೀರಿನ ಅನುದಾನ. ವಿಧಾನ ಸಭಾ, ವಿಧಾನಪರಿಷತ್ ಹಾಗೂ ಲೋಕಸಭಾ ಸದಸ್ಯರ ಅನುದಾನ, ವೇತನ ಅನುದಾನ, ವಿದ್ಯುತ್ ಶಕ್ತಿ, ಸ್ವಚ್ಛಭಾರತ್ ಯೋಜನೆಯಿಂದ ಒಟ್ಟು 1.67 ಕೋಟಿ ಅನುದಾನ ನಿರೀಕ್ಷಿಸಲಾಗಿದೆ.

ಕಚೇರಿ ಆಡಳಿತಾತ್ಮಕ ವೆಚ್ಚ, ರಸ್ತೆ ಅಭಿವೃದ್ಧಿ, ಚರಂಡಿಗಳ ಅಭಿವೃದ್ಧಿ, ನೀರುವಿತರಣಾ ವ್ಯವಸ್ಥೆ, ಬೀದಿ ದೀಪ ವ್ಯವಸ್ಥೆ, ಸಮುದಾಯ ಭವನಗಳ ಅಭಿವೃದ್ಧಿ, ಪಾರ್ಕ್ ಸ್ಮಶಾನ, ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕದ ಅಭಿವೃದ್ಧಿ, ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಇತರೆ ವರ್ಗ ಹಾಗೂ ಅಂಗವಿಕಲ ಕಲ್ಯಾಣ ಕಾರ್ಯಕ್ರಮದ ಬಾಬ್ತುಗಳ ಮೇಲೆ ₹4.3ಕೋಟಿ ವೆಚ್ಚ ಮಾಡಬಹುದೆಂದು ನಿರೀಕ್ಷಿಸಲಾಗಿದೆ ಎಂದರು.

ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾತನಾಡಿ, 2024–25ನೇ ಸಾಲಿನಲ್ಲಿ ಮನೆ ಕಂದಾಯ, ನೀರಿನ ಕಂದಾಯ, ವ್ಯಾಪಾರ ಪರವಾನಿಗೆ ವಸೂಲಾತಿಯಲ್ಲಿ ಶೇ. 98 ರಷ್ಟು ಪ್ರಗತಿ ಸಾಧಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ಕೆ ಎಲ್ಲಾ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಶಾಸಕರ ಪ್ರಯತ್ನದಿಂದ ಮಂಜೂರಾದ 2 ಕೋಟಿ ಅನುದಾನದ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬಡ ವರ್ಗದ ಹೆಣ್ಣು ಮಕ್ಕಳ ವಿವಾಹಕ್ಕೆ 5 ಸಾವಿರ ನೆರವು ನೀಡುವ ಯೋಜನೆ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು. ಬಡ ಕುಟುಂಬದವರು ಮೃತಪಟ್ಟರೆ ಶವ ಸಂಸ್ಕಾರಕ್ಕೆ 3 ಸಾವಿರ ನೆರವು ನೀಡಲಾಗುತ್ತಿದೆ. ಹೊರಗುತ್ತಿಗೆ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾದಲ್ಲಿ ಸಹಾಯಹಸ್ತ ಚಾಚಲು 3 ಲಕ್ಷ ಬಜೆಟ್ ನಲ್ಲಿ ಮೀಸಲಿಡಲಾಗಿದೆ. ನೌಕರರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಪಟ್ಟಣ ಪಂಚಾಯಿತಿ ಕುಡಿಯುವ ನೀರಿಗೆ ಕೊಳವೆಬಾವಿಯನ್ನು ಅವಲಂಭಿಸಿದ್ದು ಈ ಗಾಗಲೇ 10 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಶಾಶ್ವತ ಕುಡಿಯುವ ನೀರು ಯೋಜನೆ ವಿಫಲ ವಾಗಿರುವುದರಿಂದ ಭದ್ರಾ ನದಿ ಮೂಲದಿಂದ ಪಟ್ಟಣಕ್ಕೆ ನೀರು ಪೂರೈಸುವ ಯೋಜನೆಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಮಾತನಾಡಿ, ಹೊಸದಾಗಿ ಮನೆ ನಿರ್ಮಿಸುವವರಿಗೆ ಜಿಲ್ಲಾ ಯೋಜನಾ ಪ್ರಾಧಿಕಾರದವರು ಪರವಾನಿಗೆ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ನಗರೋತ್ಥಾನ ಯೋಜನೆಯಡಿ ವೈಯಕ್ತಿಕ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವ ಪಟ್ಟಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶ ಸ್ಪಂಧಿಸುತ್ತಿಲ್ಲ. ಇಲ್ಲಿನ ಅಧಿಕಾರಿಗಳು ಹಾಗೂ ಎಂಜಿನಿಯರ್ ಬಗ್ಗೆ ಕ್ರಮಕೈಗೊಳ್ಳಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪಟ್ಟಣ ಪಂಚಾಯಿತಿ ಲೆಕ್ಕಾಧಿಕಾರಿ ಉಷಾ ಬಜೆಟ್ ಓದಿದರು. ಸಮುದಾಯ ಸಂಘಟನೆ ಅಧಿಕಾರಿ ಲಕ್ಷ್ಮಣಗೌಡ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಜುಬೇದ, ಉಮಾ, ಸೋಜ, ಕುಮಾರಸ್ವಾಮಿ, ಮಹಮ್ಮದ್ ವಸೀಂ, ರೇಖಾ, ರೀನಾ ಮೋಹನ್‌, ಮುಕಂದ ಇದ್ದರು.