ನಾರಾಯಣಗುರುಗಳ ಚಿಂತನೆಯಿಂದ ವರ್ತಮಾನದ ಗೊಂದಲಗಳಿಗೆ ಪರಿಹಾರ: ದಯಾನಂದ ಕರ್ಕೇರ

| Published : Jan 15 2025, 12:49 AM IST

ಸಾರಾಂಶ

ಶ್ರೀ ನಾರಾಯಣಗುರು ಯುವ ವೇದಿಕೆ ಉಡುಪಿ ವತಿಯಿಂದ ಭುಜಂಗ ಪಾರ್ಕ್‌ನಲ್ಲಿ ಸೇವಾ ಸೌರಭ ಸಂಭ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆಯ ವಿರುದ್ಧ ಸಂಘರ್ಷ ರಹಿತವಾದ ಸುಧಾರಣಾ ಕ್ರಾಂತಿಯನ್ನು ರೂಪಿಸಿ ಆ ಮೂಲಕ ಯಶಸ್ವಿಯಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಪ್ರತಿಯೊಂದು ಅನುಷ್ಠಾನ ಹಾಗೂ ಚಿಂತನೆಗಳು ಬೆಂಕಿಯಾಗಿ ಕಾಡುತ್ತಿರುವ ವರ್ತಮಾನದ ಗೊಂದಲಗಳಿಗೆ ಸೂಕ್ತ ಪರಿಹಾರವಾಗಬಲ್ಲ ಬೆಳಕಿನ ಮೌಲ್ಯವನ್ನು ಹೊಂದಿದೆ ಎಂದು ದಯಾನಂದ ಕರ್ಕೇರ ಅಭಿಪ್ರಾಯಪಟ್ಟರು.

ಅವರು ಶ್ರೀ ನಾರಾಯಣಗುರು ಯುವ ವೇದಿಕೆ ಉಡುಪಿ ವತಿಯಿಂದ ಭಾನುವಾರ ಭುಜಂಗ ಪಾರ್ಕ್ ಜರುಗಿದ ಸೇವಾ ಸೌರಭ ಸಂಭ್ರಮದಲ್ಲಿ ಗುರು ಸಂದೇಶವನ್ನು ವಿವರಿಸುತ್ತಾ, ಗುರುಗಳು ಮಾನವೀಯ ಪ್ರಜ್ಞೆಯಿಂದ ಚಳುವಳಿಯನ್ನು ರೂಪಿಸಿ ಭವ್ಯಭವಿಷ್ಯಕ್ಕೆ ದಾರಿ ತೋರಿಸಿದ್ದಾರೆ. ಅಂಥಹದ್ದೆ ದಿಟ್ಟತನದ ನಿಲುವಿನಲ್ಲಿ ಜಾತ್ಯತೀತವಾಗಿ ಸತ್ಕಾರ್ಯಗಳನ್ನು ನಡೆಸುತ್ತಾ ಸರ್ವರ ಹಿತಾಸಕ್ತಿಯ ಪ್ರತೀಕವಾದ ಹಳದಿ ಧ್ವಜದೊಂದಿಗೆ ಗುರುಕಟ್ಟೆಯನ್ನು ಸೌಹಾರ್ದ, ಸಾಮರಸ್ಯ, ಸಮೃದ್ಧಿಯ ಆಶಯದೊಂದಿಗೆ ಸ್ಥಾಪಿಸಿದ ಕರಾವಳಿಯ ಏಕೈಕ ಸಂಘಟನೆಯಾದ ನಾರಾಯಣಗುರು ಯುವ ವೇದಿಕೆಯ ಸೇವಾ ವೈಖರಿ ಗುರು ಬಯಸುವಂತದ್ದು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಮಿಥುನ್ ಅಮೀನ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ಉದ್ಯಮಿ ಹರೀಶ್ ಪೂಜಾರಿ, ಉಡುಪಿ ವಕೀಲರ ಸಂಘ ಅಧ್ಯಕ್ಷ ರೊನಾಲ್ಡ್ ಪ್ರವೀಣ್ ಕುಮಾರ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ದೀಪಕ್ ಕೋಟ್ಯಾನ್ ಉಪಸ್ಥಿತರಿದ್ದರು. ಶಬರೀಶ್ ಸುವರ್ಣ ಸ್ವಾಗತಿಸಿದರು. ಸತೀಶ್ ಕೊಡವೂರ ನಿರೂಪಿಸಿದರು. ಶ್ರೀ ನಾರಾಯಣಗುರು ಯುವ ವೇದಿಕೆಯ ಗೌರವಾಧ್ಯಕ್ಷ ಸದಾಶಿವ ಅಮೀನ್ ವಂದಿಸಿದರು.