ಸಾರಾಂಶ
ಚಾಮರಾಜನಗರ: ನಾರಾಯಣ ಗುರು ಅವರು ಬಡವ-ಬಲ್ಲಿದ, ಮೇಲು-ಕೀಳು ಅಸಮಾನತೆ ಹೋಗಲಾಡಿಸಿ ಸಾಮಾಜಿಕ ಪರಿವರ್ತನೆಗೆ ಮುನ್ನುಡಿ ಬರೆದ ಮಹಾನ್ ಪುರುಷರಾಗಿದ್ದಾರೆ ಎಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಕೃಷ್ಣಮೂರ್ತಿ ಚಮರಂ ತಿಳಿಸಿದರು.
ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಅವರ 170ನೇ ಜಯಂತಿ ಕಾರ್ಯಕ್ರಮದ ಮುಖ್ಯ ಭಾಷಣ ಮಾಡಿ ಅವರು ಮಾತನಾಡಿದರು.ಭಾರತದಲ್ಲಿ ಜಾತಿ, ಲಿಂಗ ತಾರತಮ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. 19-20ನೇ ಶತಮಾನವನ್ನು ಕ್ರಾಂತಿಯುಗವೆಂದೇ ಹೇಳಬಹುದಾಗಿದೆ. ಸಮಾಜದಲ್ಲಿ ಅಸ್ಪೃಶ್ಯತೆ, ಮೌಢ್ಯತೆ, ಕಂದಚಾರ, ಅಸಮಾನತೆ ವ್ಯಾಪಕವಾಗಿ ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ಬದಲಾವಣೆಯ ಹರಿಕಾರರಾಗಿ ಬಂದವರು ನಾರಾಯಣ ಗುರು ಅವರು. ಮಾನವರೆಲ್ಲರೂ ಒಂದೇ ಎಂಬ ತತ್ವಸಿದ್ಧಾಂತ ಸಾರಿದರು. ಹೋರಾಟ, ಚಳವಳಿಗಿಂತಲೂ ಮೌನಕ್ರಾಂತಿ ನಾರಾಯಣ ಗುರು ಅವರ ಉದ್ದೇಶವಾಗಿತ್ತು ಎಂದು ತಿಳಿಸಿದರು.
ದೇವರನಾಡು ಕೇರಳದಲ್ಲಿ ಜನಿಸಿದ ನಾರಾಯಣ ಗುರು ಅವರು ದೇಶಾದ್ಯಂತ ಸಂಚರಿಸಿ ಸಾಮಾಜಿಕ ಚಳವಳಿಗಳ ಮೂಲಕ ಮನುಷ್ಯತ್ವ ನೆಲೆಗಟ್ಟಿನಲ್ಲಿ, ಮಾನವತೆಯ ಆಧಾರದಲ್ಲಿ ಅಖಂಡ ಭಾರತವನ್ನು ಕಟ್ಟಲು ಶ್ರಮಿಸಿದರು. ಬುದ್ಧ, ಬಸವಣ್ಣ, ನಾರಾಯಣ ಗುರು, ಪೆರಿಯಾರ್ ರಾಮಸ್ವಾಮಿ, ಸಾವಿತ್ರಿ ಬಾಪುಲೆ ಇವರೆಲ್ಲರ ಆಲೋಚನೆ, ಅಭಿಪ್ರಾಯಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಕಾನೂನಾತ್ಮಕ ನೆಲೆಗಟ್ಟು ನೀಡಿದರು. ಅವರ ಹೋರಾಟದ ಫಲವಾಗಿ ನಾವೆಲ್ಲರೂ ಇಂದು ನೆಮ್ಮದಿ ಜೀವನ ಸಾಗಿಸುತ್ತಿದ್ದೇವೆ ಎಂದು ಹೇಳಿದರು.ತೀರ್ಥಹಳ್ಳಿ ತಾಲೂಕಿನ ನಿಟ್ಟೂರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮಿಜೀ ಮಾತನಾಡಿ, ಹುಟ್ಟಿನಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗುವಂತೆ ಮನುಕುಲಕ್ಕೆ ಸಂದೇಶ ಸಾರಿದ ನಾರಾಯಣ ಗುರು ಅವರು ಸರ್ವಕಾಲಕ್ಕೂ ಅನುಕರಣೀಯರಾಗಿದ್ದಾರೆ ಎಂದರು.
ನಾರಾಯಣಗುರು ಅವರು ಕೇರಳದಲ್ಲಿ ನಡೆಸಿದ ಶೈಕ್ಷಣಿಕ ಕ್ರಾಂತಿಯಿಂದ ಇಂದು ದೇಶದಲ್ಲಿಯೇ ಹೆಚ್ಚಿನ ಸಾಕ್ಷರರನ್ನು ಹೊಂದಿರುವ ರಾಜ್ಯ ಕೇರಳವಾಗಿದೆ ಎಂದ ಅವರು, ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಎಲ್ಲರು ಶಿಕ್ಷಣ ಪಡೆಯಬೇಕು. ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಸಾಮಾಜಿಕ ನ್ಯಾಯ ಪಡೆಯಬಹುದೆಂದು ನಾರಾಯಣ ಗುರು ಪ್ರತಿಪಾದಿಸಿದರು ಎಂದು ತಿಳಿಸಿದರು.ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮಾತನಾಡಿ, ಬಡವರು, ಶೋಷಿತರು ಶಿಕ್ಷಣ ಪಡೆದು ಸಮಾಜದ ಮೇಲ್ಪಂಕ್ತಿಗೆ ಬರಬೇಕೆನ್ನುವುದು ನಾರಾಯಣ ಗುರುಗಳ ಚಿಂತನೆಯ ಅಶಯವಾಗಿತ್ತು. ಅವರ ಆದರ್ಶ ಚಿಂತನೆಗಳು, ವಿಚಾರಧಾರೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆಯೋಣ ಎಂದರು.
ನಗರಸಭೆ ಸದಸ್ಯರಾದ ಮಮತ ಬಾಲಸುಬ್ರಮಣ್ಯಂ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯ್‌ಕುಮಾರ್ ಮತ್ತಿತರರಿದ್ದರು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ನಾರಾಯಣ ಗುರು ಭಾವಚಿತ್ರವನ್ನೊಳಗೊಂಡ ಅಕರ್ಷಕ ಮೆರವಣಿಗೆಗೆ ತೀರ್ಥಹಳ್ಳಿ ತಾಲೂಕಿನ ನಿಟ್ಟೂರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಚಾಲನೆ ನೀಡಿದರು.