ಸಾರಾಂಶ
ಶಿವಮೊಗ್ಗ: ಮಾನವೀಯ ಸಂಪರ್ಕಕ್ಕೆ ಹೆಸರುವಾಸಿಯಾದ ನಾರಾಯಣ್ ಅವರು ಸಮಾಜದ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಡಾ.ಪಿ.ನಾರಾಯಣ ಅಭಿನಂದನಾ ಸಮಿತಿಯ ವತಿಯಿಂದ ಏರ್ಪಡಿಸಿದ್ದ ಡಾ.ಪಿ.ನಾರಾಯಣ ಅವರಿಗೆ ''''''''ಜನವೈದ್ಯ ನಮನ'''''''' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಔಷಧಿಯ ಜೊತೆಗೆ ರೋಗಿಯಲ್ಲಿ ಅದಮ್ಯವಾದ ಆತ್ಮವಿಶ್ವಾಸ ಹುಟ್ಟಿಸುವ ಸಹೃದಯಿ ವೈದ್ಯ ನಾರಾಯಣ್. ಇಂದಿನ ವಾಣಿಜ್ಯಕರಣದ ಯುಗದಲ್ಲಿ ವೈದ್ಯರು ರೋಗಿಯೊಂದಿಗೆ ಮಾತನಾಡುವ ಕ್ರಮವೇ ಬದಲಾಗಿದೆ. ವೈದ್ಯ ಮತ್ತು ರೋಗಿಯ ಸಂಬಂಧಕ್ಕೆ ಕಾರ್ಪೊರೇಟ್ ಸ್ಪರ್ಶ ನೀಡಲಾಗಿದೆ. ಗೂಗಲ್‌ನೊಂದಿಗೆ ಮಾತನಾಡಿದ ಅನುಭವ ಈಗಿನ ವೈದ್ಯರಲ್ಲಿ ಕಾಣುತ್ತಿದೆ. ರೋಗಿಯಲ್ಲಿ ಆತ್ಮಸ್ಥೈರ್ಯ ತುಂಬುವ ವಾತಾವರಣ ಕುಂಟಿತಗೊಳ್ಳುತ್ತಿರುವ ಈ ಹೊತ್ತಿನಲ್ಲಿ ನಾರಾಯಣ್ ಅವರಂತಹ ವೈದ್ಯರ ಅವಶ್ಯಕತೆ ತುರ್ತಾಗಿದೆ ಎಂದರು.ಕುಟುಂಬ ವೈದ್ಯರು ಎಂಬ ಕಲ್ಪನೆಗಳು ಬದಲಾಗುತ್ತಿದೆ. ಒಂದು ಸಲ ಆಸ್ಪತ್ರೆ ಒಳಗೆ ಹೋದರೆ, ಎಲ್ಲಾ ಪರೀಕ್ಷೆಗಳನ್ನು ಮುಗಿಸಿ, ಯಾವುದೇ ರೋಗವಿಲ್ಲ ಎಂದು ವರದಿ ಬರುವುದರೊಳಗೆ, ಜೇಬೆಲ್ಲ ಖಾಲಿಯಾಗಿರುತ್ತದೆ. ಇಂಥಹ ಹೊತ್ತಿನಲ್ಲಿ ರೋಗಿಯ ಅಂತರಾಳದಲ್ಲಿ ಸ್ಥೈರ್ಯತೆ ಶಕ್ತಿ ಬಿತ್ತುವ ಕಾರ್ಯಕ್ಕೆ, ನಾರಾಯಣ್ ಅವರಂತಹ ವೈದ್ಯರಿಂದ ಪ್ರೇರಣೆ ಪಡೆಯಬೇಕಿದೆ ಎಂದು ಹೇಳಿದರು.ಪದ್ಮಶ್ರೀ ಪುರಸ್ಕೃತ ವಿ.ಆರ್.ಗೌರೀಶಂಕರ್ ಮಾತನಾಡಿ, ಕುಟುಂಬದ ವೈದ್ಯರೊಂದಿಗಿನ ಆತ್ಮೀಯತೆ ನಿಜಕ್ಕೂ ನಮಗೆ ಸಂಜೀವಿನಿ. ಸಮಾಜದಲ್ಲಿ ಇಂದು ಎಷ್ಟು ಹದಗೆಟ್ಟಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ನಮ್ಮ ಹೊಸ ತಲೆಮಾರಿನ ಮಕ್ಕಳಿಗೆ ಯಾವ ಆದರ್ಶಗಳನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬ ಆತಂಕ ಕಾಡುತ್ತಿದೆ. ಅಂತಹ ಆತಂಕಗಳ ನಡುವೆ ಭರವಸೆಯ ಬೆಳಕಾಗಿ ನಿಲ್ಲುವವರು ನಾರಾಯಣ ಅವರಂತಹ ವ್ಯಕ್ತಿತ್ವಗಳು ಎಂದು ಬಣ್ಣಿಸಿದರು.ಅಧ್ಯಕ್ಷತೆ ವಹಿಸಿದ್ದ ಅಭಿನಂದನಾ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಸಮಾಜ ಕಂಡ ಅದ್ಭುತ ಯೋಜಕ ನಾರಾಯಣ್ ಅವರು. ಶಂಕರ ಮಠದ ಒಡನಾಟ ಅತ್ಯಂತ ಪ್ರಭಾವಯುತ ವ್ಯಕ್ತಿತ್ವ ನಿರ್ಮಾಣವಾಗಲು ಅವರಿಗೆ ಸಾಧ್ಯವಾಯಿತು. ಸಂಬಂಧ, ಸ್ನೇಹಯುತ ಸಮಾಜದ ಸಜ್ಜನ ಎಂಬ ಹೆಗ್ಗಳಿಕೆ ಅವರದು ಎಂದರು.
ಅಭಿನಂದನಾ ಸಮಿತಿ ಕಾರ್ಯದರ್ಶಿ ಡಾ.ಎಚ್.ಎಸ್.ನಾಗಭೂಷಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯ ಡಾ.ಪಿ.ನಾರಾಯಣ್ ಉಪಸ್ಥಿತರಿದ್ದರು. ರಶ್ಮೀ ಕಾರಂತ್ ಪ್ರಾರ್ಥಿಸಿದರು. ಎ.ಎಸ್.ಕೃಷ್ಣಮೂರ್ತಿ ವಂದಿಸಿದರು. ತುರವನೂರು ಮಲ್ಲಿಕಾರ್ಜುನ ನಿರೂಪಿಸಿದರು. ಅನುಭವದಿಂದ ಬರುವ ಜ್ಞಾನಎಲ್ಲರಿಗೂ ಏಕರೂಪ: ಶ್ರೀ
ಶಿವಮೊಗ್ಗ: ಮನುಷ್ಯನ ಮನಸ್ಸಿನಲ್ಲಿ ನಂಬಿಕೆ, ಭಾವನೆ, ಅನುಭವ ಎಂಬ ಮೂರು ವಿಷಯಗಳು ಪ್ರಾಧಾನ್ಯತೆ ಪಡೆದಿವೆ. ನಂಬಿಕೆ ಮತ್ತು ಭಾವನೆಯಿಂದ ಬರುವ ಧರ್ಮ ಭಿನ್ನವಾಗಿರಬಹುದು, ಅದರೇ ಅನುಭವದಿಂದ ಬರುವ ಜ್ಞಾನ ಮಾತ್ರ ಎಲ್ಲರಿಗೂ ಏಕರೂಪ ಎಂದು ಮತ್ತೂರಿನ ಅಕ್ಷರಾನಂದೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.ಧಾರ್ಮಿಕ ಚಿಂತನ ಗೋಷ್ಠಿಯಲ್ಲಿ ಮಾತನಾಡಿ, ಅಖಂಡ ಜಗತ್ತಿನ ಅಧಾರವೇ ಧರ್ಮ. ಅನುಭವಪೂರ್ವಕ ಜ್ಞಾನವೇ ಧರ್ಮ. ಪ್ರಪಂಚದ ಎಲ್ಲಾ ಮನುಷ್ಯರಿಗೆ ಯಾವುದೇ ಭೇದ ಭಾವವಿಲ್ಲದ ಜ್ಞಾನ ಸ್ವರೂಪಕ್ಕೆ ಮುಖ್ಯ ಅರ್ಥ. ಸುಳ್ಳು ಕಪಟವಿಲ್ಲದ ವೃತ್ತಿ ಧರ್ಮ ಮತ್ತು ಕುಟುಂಬ ಧರ್ಮ ಮನುಷ್ಯನಿಗೆ ಬೇಕಿದೆ ಎಂದರು.
ಲಂಡನ್ ಭಾರತೀಯ ವಿದ್ಯಾಭವನದ ನಿರ್ದೇಶಕ ಡಾ.ಎಂ.ಎನ್.ನಂದಕುಮಾರ್ ಮಾತನಾಡಿ, ಜೀವನದಲ್ಲಿ ಪರಿಪಕ್ವತೆ ಬಂದಾಗ ಒಳ್ಳೆಯ, ಕೆಟ್ಟ ವಿಚಾರಗಳ ಆಚರಣೆ ಒಡಗೂಡಿಸಿಕೊಳ್ಳುತ್ತೇವೆ. ಜ್ಞಾನವೆಂಬುದು ಯಾವುದೇ ಸೀಮಿತತೆಗೆ ಒಳಗಾಗಿಲ್ಲ. ಉತ್ತಮ ಜ್ಞಾನವೇ ಧರ್ಮದ ನಿಜವಾದ ಆಚರಣೆ. ಭೂಮಿಯಲ್ಲಿ ಇರುವುದು ನನಗೆ ಸೇರಿರುವುದಲ್ಲ, ಅದು ನಮಗೂ ಸೇರಿರುವುದು ಎಂಬ ಲೋಕ ಹಿತದ ಚಿಂತನೆ ಮೂಡಿದಾಗ ಸದಾಚಾರ ಬೆಳೆಯುತ್ತದೆ ಎಂದರು.ಹಾಲಾಡಿ ಪಂಚಾಂಗಕರ್ತರಾದ ವಾಸುದೇವ ಜೋಯಿಸರು ಮಾತನಾಡಿದರು. ನಿವೃತ್ತ ಉಪನ್ಯಾಸಕ ಎ.ಎಸ್.ಕೃಷ್ಣಮೂರ್ತಿ ಸಮನ್ವಯಗೊಳಿಸಿದರು.