ಸಾರಾಂಶ
ಕನ್ನಡಕ್ಕಾಗಿ ಹೋರಾಟ ಮಾಡುತ್ತಿರುವ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು ಬಂಧಿಸಿರುವುದು ಖಂಡನೀಯ
ಕನ್ನಡಪ್ರಭ ವಾರ್ತೆ ಸಿಂದಗಿ ಕರ್ನಾಟಕ ರಕ್ಷಣಾ ವೇದಿಕೆ ನಿರಂತರವಾಗಿ ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಧಕ್ಕೆ ಬಂದಾಗ ಬೀದಿಗಿಳಿದು ಹೋರಾಟ ಮಾಡುತ್ತಿದೆ. ಕನ್ನಡಕ್ಕಾಗಿ ಹೋರಾಟ ಮಾಡುತ್ತಿರುವ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು ಬಂಧಿಸಿರುವುದು ಖಂಡನೀಯ ಎಂದು ರಕ್ಷಣಾ ವೇದಿಕೆಯ ಮುಖಂಡ ಸಂತೋಷ ಪಾಟೀಲ ಡಂಬಳ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಕ್ಕಾಗಿ ನಿರಂತರ ಹೋರಾಟ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪಟ್ಟಣದ ಬಸವೇವೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟಿಸಿ ತಹಸೀಲ್ದಾರ್ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಗರ ಹಾವಳಿ ಹೆಚ್ಚಿದೆ. ಅದನ್ನು ಕಂಡ ಕರವೇಯ ಟಿ.ಎನ್.ನಾರಾಯಣಗೌಡರು ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು ಎಂದು ಕನ್ನಡ ನಾಮಫಲಕ ಅಭಿಯಾನ ಹೋರಾಡಿದಕ್ಕಾಗಿ ಅವರನ್ನು ಬಂಧಿಸಿದ್ದು ಖಂಡನೀಯ. ಇದು ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಕೂಡಲೇ ಅರವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಶ್ರೀಕಾಂತ ಬಿಜಾಪೂರ, ಮಂಜು ಬಿಜಾಪೂರ, ಬಂಗಾರೆಪ್ಪ ಬಿರಾದಾರ, ರವಿ ನಾಯ್ಕೋಡಿ, ತನ್ವೀರ ಬೈರಾಮಡಗಿ, ಸಂದೀಪ ಚೌರ, ಮಾಂತೇಶ ಪಾರಗೊಂಡ, ಮಡಿವಾಳಪ್ಪ ಬಿರಾದಾರ, ಶ್ರೀಶೈಲ ಚಳ್ಳಗಿ, ಶ್ರೀಕಾಂತ ರಾಠೋಡ, ಅಂಬರೀಶ ಮಾರಲಬಾವಿ, ಸಂತೋಷ ಕ್ಷತ್ರಿ, ಗೊಲ್ಲಾಳ ಬ್ಯಾಕೋಡ, ಸಮೀರ ಪಟೇಲ ಸೇರಿದಂತೆ ಅನೇಕರು ಇದ್ದರು.