ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯಲ್ಲಿ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಜಿಲ್ಲೆಯ ಈಡಿಗ, ಬಿಲ್ಲವ, ದೀವರು, ನಾಮಧಾರಿ ಸಹಿತ ವಿವಿಧ ಉಪಪಂಗಡಗಳ ಸಂಘಟನೆಗಳ ಮುಖಂಡರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯಲ್ಲಿ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಜಿಲ್ಲೆಯ ಈಡಿಗ, ಬಿಲ್ಲವ, ದೀವರು, ನಾಮಧಾರಿ ಸಹಿತ ವಿವಿಧ ಉಪಪಂಗಡಗಳ ಸಂಘಟನೆಗಳ ಮುಖಂಡರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಜತೆಗೆ, ಆ.28ರಂದು ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯಲಿರುವ ಸರ್ಕಾರಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಈಡಿಗ, ಬಿಲ್ಲವ, ದೀವರು ಸಹಿತ ಎಲ್ಲ 26 ಉಪಪಂಗಡಗಳ ಸಹಕಾರದೊಂದಿಗೆ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಿಸಿಕೊಂಡು ಬರುತ್ತಿರುವುದು ಸ್ವಾಗತಾರ್ಹ. ಇದೇ ಮಾದರಿಯಲ್ಲಿ ಈ ಬಾರಿಯೂ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಡಳಿತದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಭಿಷೇಕ ಅವರು ಸಭೆಗೆ ತಿಳಿಸಿದ್ದರು. ಸಭೆಯಲ್ಲಿ ಹಾಜರಿದ್ದ ಮುಖಂಡರು ಇದಕ್ಕೆ ಒಪ್ಪಿಗೆ ಸೂಚಿಸಿ ಸರ್ಕಾರದೊಂದಿಗೆ ಸಹಕರಿಸಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಹಮತ ವ್ಯಕ್ತಪಡಿಸಿದ್ದರು.

ಆದರೆ ಪೂರ್ವಭಾವಿ ಸಭೆಯ ಎರಡು ದಿನಗಳ ಬಳಿಕ ಪ್ರಕಟಿಸಿದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಆರ್ಯ ಈಡಿಗ ಸಂಘದ ಹೆಸರು ಹಾಗೂ ಜಿಲ್ಲಾಧ್ಯಕ್ಷರ ಹೆಸರು ಇಲ್ಲದಿರುವುದು ಗಮನಕ್ಕೆ ಬಂದಿದೆ ಎಂದು ಮುಖಂಡರು ತಿಳಿಸಿದ್ದಾರೆ. ಈ ಹಿಂದೆ ಪ್ರತಿವರ್ಷ ಜಿಲ್ಲಾ ಈಡಿಗ ಸಂಘದ ಹೆಸರು ಆಹ್ವಾನ ಪತ್ರಿಕೆಯ ಮುಖಪುಟದಲ್ಲಿದ್ದು, ಜಿಲ್ಲಾಧ್ಯಕ್ಷರ ಹೆಸರು ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ಇರುತ್ತಿತ್ತು. ಈ ಬಾರಿ ಎರಡೂ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.

ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಅವರನ್ನು ವಿಚಾರಿಸಿದಾಗ, ಹೊಸ ಪ್ರೊಟೊಕಾಲ್ ಬಂದಿದ್ದು, ಯಾವುದೇ ಜಾತಿ, ಸಂಘದ ಹೆಸರು ಹಾಗೂ ಅಧ್ಯಕ್ಷರ ಹೆಸರನ್ನು ಹಾಕುವಂತಿಲ್ಲ ಎಂದು ತಿಳಿಸಿದ್ದಾಗಿ ಮುಖಂಡರು ಹೇಳಿದ್ದಾರೆ. ಗಾಂಧಿ ಜಯಂತಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಮಾದರಿಯಲ್ಲಿ ಸರ್ಕಾರದ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿ ವಿಚಾರಗಳಿಗೆ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ ಎಂದು ತಿಳಿಸಿದರು.

ನಂತರ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಆರ್. ಹುಲ್ತಿಕೊಪ್ಪ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಅವರನ್ನು ದೂರವಾಣಿ ಮೂಲಕ ವಿಚಾರಿಸಿದ್ದು, ಈ ವಿಚಾರದಲ್ಲಿ ತಮಗೆ ಸಂಬಂಧವಿಲ್ಲ, ಜಿಲ್ಲಾಧಿಕಾರಿಯವರನ್ನೇ ಕೇಳಬೇಕು ಎಂದು ಉತ್ತರಿಸಿರುವುದಾಗಿ ಆರೋಪಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಈಡಿಗ ಸಂಘಗಳ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ನಡೆಯುತ್ತಿರುವಾಗ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಯಾವ ಹೊಸ ಪ್ರೊಟೊಕಾಲ್ ಜಾರಿಯಾಗಿದೆ? ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು ಎಂದು ಮುಖಂಡರು ಒತ್ತಾಯಿಸಿದರು. ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಕಾರ್ಯಕ್ರಮದಲ್ಲಿಯೂ ಈಡಿಗ ಸಮಾಜದ ಎಲ್ಲ ಉಪಜಾತಿಗಳ ಹಾಗೂ ವಿವಿಧ ಸ್ವಾಮೀಜಿಗಳ ಹೆಸರುಗಳನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ತಾಲೂಕು ಆಡಳಿತದ ಅಧೀನದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿಯೂ ಆಯಾ ತಾಲೂಕು ಈಡಿಗ ಸಂಘಗಳ ಅಧ್ಯಕ್ಷರು ಹಾಗೂ ವಿವಿಧ ಉಪಪಂಗಡಗಳ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ ಸಮಾಜವು ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಎಸ್. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಗಣಪತಿಯಪ್ಪ ಅವರಂತಹ ಮಹಾನ್ ನಾಯಕರಿಗೆ ಜನ್ಮ ನೀಡಿದ ಜಿಲ್ಲೆ ಇದಾಗಿದೆ. ಇಂತಹ ಸಂದರ್ಭ ಈಡಿಗ ಸಮಾಜವನ್ನು ಹೊರಗಿಟ್ಟು ಜಯಂತಿ ಆಚರಿಸುವುದು ಖಂಡನೀಯ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಸಂದರ್ಭ ಈಡಿಗ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್ ಆರ್. ಹುಲ್ತಿಕೊಪ್ಪ, ಉಪಾಧ್ಯಕ್ಷ ಎನ್.ಪಿ. ಧರ್ಮರಾಜ್‌, ಖಜಾಂಚಿ ಕಾಗೋಡು ರಾಮಪ್ಪ, ನಿರ್ದೇಶಕ ಕೆ.ವೈ. ರಾಮಚಂದ್ರ, ರುದ್ರಪ್ಪ, ಸಹಕಾರ್ಯದರ್ಶಿ ರಾಜಪ್ಪ, ಹಿಳ್ಳೋಡಿ ಕೃಷ್ಣಮೂರ್ತಿ, ಬಿಲ್ಲವ ಸಂಘದ ಅಧ್ಯಕ್ಷ ಭುಜಂಗಯ್ಯ, ಪ್ರೊ. ಕಲ್ಲನ, ಉದಯ್ ಕುಮಾರ್ ಸೇರಿದಂತೆ ಪ್ರಮುಖರು ಇದ್ದರು.

-----ಬಾಕ್ಸ್-----

ಸರ್ಕಾರದ ಮಧ್ಯಪ್ರವೇಶಿಸಲಿ: ಮುಖಂಡರ ಒತ್ತಾಯ

ಸಂತ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ, ಸಿದ್ಧಾಂತಗಳ ಅಳವಡಿಸಿಕೊಂಡು ಬರುತ್ತಿರುವ ಶಿವಮೊಗ್ಗ ಜಿಲ್ಲೆಯ ಈಡಿಗ, ದೀವರು, ಬಿಲ್ಲವ, ನಾಮಧಾರಿ ಹಾಗೂ ಇನ್ನಿತರ ಉಪಪಂಗಡಗಳ ಜನಾಂಗಕ್ಕೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವಮಾನ ಮಾಡಿದೆ. ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘದ ಅಡಿಯಲ್ಲಿ ಸಮಾಜದ ಎಲ್ಲ ಸಂಘಟನೆಗಳ ಮುಖಂಡರು ಹಾಗೂ ಸಮಾಜ ಬಾಂಧವರ ಸಹಯೋಗದಲ್ಲಿ ಪ್ರತ್ಯೇಕವಾಗಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಾಜಕ್ಕೆ ಆಗಿರುವ ಅನ್ಯಾಯ ಮತ್ತು ಅವಮಾನಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.

-----------------

ಪೋಟೋ: 27ಎಸ್‌ಎಂಜಿಕೆಪಿ02

ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯಲ್ಲಿ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಜಿಲ್ಲೆಯ ಈಡಿಗ, ಬಿಲ್ಲವ, ದೀವರು, ನಾಮಧಾರಿ ಸಹಿತ ವಿವಿಧ ಉಪಪಂಗಡಗಳ ಸಂಘಟನೆಗಳ ಮುಖಂಡರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.