ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬ್ರಹ್ಮಶ್ರೀ ನಾರಾಯಣ ಗುರುಗಳ ಸಿದ್ಧಾಂತಗಳು ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿವೆ ಎಂದು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಪೀಠಾಧಿಪತಿ ಸ್ವಾಮಿ ವಿಖ್ಯಾತಾನಂದ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನಂತರ ಆರ್ಯ ಈಡಿಗರ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಸಿದ್ದಾಂತಗಳು, ಚಿಂತನೆಗಳು ಪ್ರತಿ ಕಾಲಘಟ್ಟಕ್ಕೂ ಪ್ರಚಲಿತವಾಗಿವೆ. ನಾವುಗಳು ನಾರಾಯಣ ಗುರುಗಳ ಸಿದ್ದಾಂತವನ್ನು ಜೀವಿತದಲ್ಲಿ ಅಳವಡಿಸಿಕೊಳ್ಳಬೇಕಿದೆ. ನಮ್ಮಲ್ಲಿರುವ ಸಂಪತ್ತಿನ ಹಾಗೂ ಸಮಯದ ಸ್ವಲ್ಪ ಭಾಗವನ್ನು ಸಮಾಜದ ಏಳಿಗೆಗಾಗಿ ವಿನಿಯೋಗಿಸಬೇಕು ಎಂದು ಹೇಳಿದರು.ಪತ್ರಕರ್ತ ಮಾಲತೇಶ್ ಅರಸ್ ಮಾತನಾಡಿ, ನಾರಾಯಣ ಗುರುಗಳು ಹಿಂದೂ ಧರ್ಮದೊಳಗಿನ ಜಾತಿ, ಭೇದ, ಅಸ್ಪೃಶ್ಯತೆ ಹಾಗೂ ಶೋಷಣೆ ವಿರುದ್ಧ ತೀವ್ರ ಹೋರಾಟ ನಡೆಸಿದರು. ಒಂದು ಜಾತಿ, ಒಂದು ಧರ್ಮ, ಒಂದು ದೇವರು ಎಂಬ ಘೋಷಣೆಯ ಮೂಲಕ ಅವರು ಸಮಾನತೆಯ ಸಮಾಜವನ್ನು ಕಟ್ಟುತ್ತಾರೆ ಎಂದು ತಿಳಿಸಿದರು.
ದೇಗುಲಗಳು ಅಧ್ಯಯನ ಕೇಂದ್ರಗಳಾದಾಗ ಮಾತ್ರ ದೇಶದಲ್ಲಿ ಶೈಕ್ಷಣಿಕ ಕ್ರಾಂತಿಯಾಗುತ್ತದೆ ಎಂದು ತಿಳಿಸಿದವರು. ಭಾರತದ ಸಾಮಾಜಿಕ-ಧಾರ್ಮಿಕ ಪರಿವರ್ತನೆಯ ಮಹಾನ್ ತತ್ವಜ್ಞಾನಿ, ಕವಿ, ದಾರ್ಶನಿಕ ಹಾಗೂ ಸಮಾಜಸೇವಕ ಬ್ರಹ್ಮಶ್ರೀ ನಾರಾಯಣ ಗುರುಗಳು. ಇವರ ಹೆಸರಿನಲ್ಲಿ ರಾಜ್ಯಾದ್ಯಂತ ಜಿಲ್ಲೆಗೊಂದರಂತೆ ಹಿಂದುಳಿದ, ಬಡ, ಶೋಷಿತ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ನಾರಾಯಣ ಗುರುಗಳ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಬೇಕು ಎಂದರು.ಚಿತ್ರದುರ್ಗ ಜಿಲ್ಲಾ ಆರ್ಯ ಈಡಿಗರ ಸಂಘ ಅಧ್ಯಕ್ಷ ಹೆಚ್.ಜೀವನ್ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಜಿಲ್ಲಾ ಸಂಘ ಹೆಚ್ಚಿನ ಒತ್ತು ನೀಡುತ್ತಿದೆ. ಕಳೆದ ಐದು ವರ್ಷಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮುದಾಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ಸನ್ಮಾನಿಸಿ, ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಕಾರ್ಯಾಗಾರಗಳನ್ನು ನಡೆಸಿ, ಶೈಕ್ಷಣಿಕ ಮಾರ್ಗದರ್ಶನವನ್ನೂ ನೀಡಲಾಗುತ್ತಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಚಿತ್ರದುರ್ಗ ಜಿಲ್ಲಾ ಆರ್ಯ ಈಡಿಗರ ಸಂಘ ಪ್ರಧಾನ ಕಾರ್ಯದರ್ಶಿ ಟಿ.ಮಂಜುನಾಥ್, ಉಪಾಧ್ಯಕ್ಷ ಟಿ.ಸ್ವಾಮಿ, ಮಹಿಳಾ ಸಂಘದ ಅಧ್ಯಕ್ಷೆ ಅನುರಾಧ ರವಿಕುಮಾರ, ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಹಾಗೂ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಒ.ಜಗದೀಶ, ಪ್ರಧಾನ ಕಾರ್ಯದರ್ಶಿ ಆರ್.ಕುಮಾರಸ್ವಾಮಿ, ಖಜಾಂಚಿ ನಾಗೇಂದ್ರ ಪ್ರಸಾದ್, ಸಂಘಟನಾ ಕಾರ್ಯದರ್ಶಿ ನಾಗರಾಜ್, ಚಿತ್ರದುರ್ಗ ಆರ್ಯ ಈಡಿಗರ ಸಂಘದ ಮುಖಂಡರಾದ ಇ.ಎನ್.ಲಕ್ಷ್ಮೀಕಾಂತ, ಅಜಯ್ ಕುಮಾರ್ ಇದ್ದರು.;Resize=(128,128))
;Resize=(128,128))
;Resize=(128,128))