ಬ್ರಹ್ಮಶ್ರೀ ನಾರಾಯಣ ಗುರುಗಳು ಮಹಾನ್ ಸಂತ, ದಾರ್ಶನಿಕ ಹಾಗೂ ಸಮಾಜ ಸುಧಾರಕರಾಗಿದ್ದರೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು. ನಗರದ ಪದವಿ ಮಹಾ ವಿದ್ಯಾಲಯ ಸಭಾಗಂಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರದಲ್ಲಿ ಬ್ರಹ್ಮ ಶ್ರೀ ನಾರಾಯಣಗುರುಗಳ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಮಾನವನಿಗೆ ಎಂಬುದು ಅವರ ಪ್ರಸಿದ್ಧ ಸಂದೇಶವಾಗಿತ್ತು. 1888ರಲ್ಲಿ ಅರುವಿಪ್ಪುರಂನಲ್ಲಿ ಶಿವನ ಮೂರ್ತಿಯ ಪ್ರತಿಷ್ಠಾಪಿಸುವ ಮೂಲಕ ಕೆಳವರ್ಗದವರೂ ದೇವಸ್ಥಾನ ಪ್ರವೇಶಿಸಬಹುದು ಮತ್ತು ಪೂಜೆ ಮಾಡಬಹುದು ಎಂದು ಅವರು ಸಾರಿದರು ಎಂದು ಶಾಸಕರು ಹೇಳಿದರು.

ವಿಧಾನಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವರೆಲ್ಲ ಒಂದೇ ಎಂಬ ಸಂದೇಶ ಸಾರಿದ್ದರು. ಮೂಢನಂಬಿಕೆ, ಕಂದಾಚಾರದ ವಿರುದ್ದ ಜನಸಾಮಾನ್ಯರಲ್ಲಿ ಅರಿವು ಮೂಡಿಸಿದ್ದರು. ಅವರ ಆದರ್ಶಗಳು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಡಾ.ಸುಭಾಷ್ಚಂದ್ರ ಕೌಲಗಿ, ಬ್ರಹ್ಮಶ್ರೀ ನಾರಾಯಣ ಗುರುಗಳು 1856 ಆ. 28 ರಂದು ಕೇರಳದ ತಿರುವನಂತಪುರಂ ಸಮೀಪದ ಚೆಂಬಜಂತಿ ಗ್ರಾಮದಲ್ಲಿ ಜನಿಸಿದರು. ತಂದೆ ಮಾದನ್ ಆಶನ್ ಮತ್ತು ತಾಯಿ ಕುಟ್ಟಿಯಮ್ಮ. ಅವರನ್ನು ಬಾಲ್ಯದಲ್ಲಿ ನಾನು ಎಂದು ಕರೆಯುತ್ತಿದ್ದರು. ಸ್ಥಳೀಯವಾಗಿ ಸಂಸ್ಕೃತ, ತಮಿಳು ಮತ್ತು ಆಯುರ್ವೇದವನ್ನು ಕಲಿತರು. ನಂತರ ವೇದ, ಉಪನಿಷತ್ತುಗಳನ್ನು ಅಧ್ಯಯನ ಮಾಡಿ ಮಲಯಾಳಂ, ಸಂಸ್ಕೃತ ಹಾಗೂ ತಮಿಳು ಭಷೆಗಳಲ್ಲಿ ಹಲವು ಆಧ್ಯಾತ್ಮಿಕ ಕೃತಿಗಳನ್ನು ರಚಿಸಿದ್ದಾರೆ.''''''''ದೈವ ದಶಕಂ'''''''' ಇವರ ಪ್ರಸಿದ್ಧ ಪ್ರಾರ್ಥನಾ ಗೀತೆ ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಸೋಲೂರು ಸಂಸ್ಥಾನದ ಮಠದ ವಿಖ್ಯಾತನಂದ ಸ್ವಾಮೀಜಿ, 100 ವರ್ಷಗಳ ಹಿಂದೆ ಬ್ರಹ್ಮಶ್ರೀ ನಾರಾಯಾಣ ಗುರುಗಳು ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಅವರ ಬದುಕು, ಕ್ರಾಂತಿಕಾರಿ ವಿಚಾರಗಳು ಎಂದಿಗೂ ಅಮರವಾಗಿರುತ್ತವೆ ಎಂದರು.

ಅಪರ ಜಿಲ್ಲಾಧಿಕಾರಿ ರಮೇಶ ಕೊಲಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳಿಳಿ, ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಮಹೇಂದ್ರ ಕುಮಾರ್ ಅನಪೂರ್, ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಉಪಸ್ಥಿತರಿದ್ದರು. ಮಾರುತಿ ಕಲಾಲ್ ಸ್ವಾಗತಿಸಿದರು. ಹನುಮಯ್ಯ ನೀಡಜಂತಿ ವಂದಿಸಿದರು. ಡಾ. ಗುರುಪ್ರಸಾದ್ ವೈದ್ಯ ನಿರೂಪಿಸಿದರು. ಇಶಾ ಪಡಶೆಟ್ಟಿ ಅವರ ಭರತನಾಟ್ಯ ಗಮನ ಸೆಳೆಯಿತು.

ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯೋತ್ಸವ ಅಂಗವಾಗಿ, ಯಾದಗಿರಿ ನಗರದಲ್ಲಿ ಗುರುವಾರ ಬೃಹತ್‌ ಮೆರವಣಿಗೆ ಆಯೋಜಿಸಲಾಗಿತ್ತು. ಸಮಾಜದ ಗುರುಗಳು, ಈಡಿಗ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರುಗಳು ಉಪಸ್ಥಿತರಿದ್ದರು.