ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮನುಷ್ಯ-ಮನುಷ್ಯರನ್ನೇ ಪ್ರೀತಿಸದೆ, ಸ್ವಾರ್ಥದ ಭಾವನೆಗಳನ್ನು ಹೊಂದಿರುವ, ಕಂದಾಚಾರ, ಮೌಢ್ಯತೆ ತುಂಬಿರುವ ಕಾಲದಲ್ಲಿ ಅವುಗಳನ್ನು ಹೋಗಲಾಡಿಸುವ ಮೂಲಕ ಮನುಷ್ಯ-ಮನುಷ್ಯರ ನಡುವಿನ ಪ್ರೀತಿಯ ಬೆಸೆಯುವ ಕಾರ್ಯ ಮಾಡಿದವರು ಬ್ರಹ್ಮಶ್ರೀ ನಾರಾಯಣ ಗುರು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಮನುಕುಲ ಕುಟುಂಬಕ್ಕೆ ಸಾರಿದವರು ಬ್ರಹ್ಮಶ್ರೀ ನಾರಾಯಣ ಗುರು. ಆ ಕಾಲದಲ್ಲಿ ಹಿಂದುಳಿದವರನ್ನು ಶೋಷಣೆ ಮಾಡಲಾಗುತ್ತಿತ್ತು. ಜೊತೆಗೆ ದೇವಸ್ಥಾನಗಳಿಗೆ ಪ್ರವೇಶವಿರಲಿಲ್ಲ. ಮೇಲು ಜಾತಿಯವರು ನಡೆಯುವ ದಾರಿಯಲ್ಲಿ ನಡೆಯುವಂತಿರಲಿಲ್ಲ. ಮಹಿಳೆಯರು ಕುಪ್ಪಸ ತೊಡುವಂತಿರಲಿಲ್ಲ. ಆಭರಣ ಧರಿಸುವಂತಿರಲಿಲ್ಲ. ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಸುಧಾರಣೆಗಾಗಿ ಬಂದ ಗುರುಗಳು ಕಂದಾಚಾರ, ಮೂಢನಂಬಿಕೆಗಳನ್ನು ಹೋಗಲಾಡಿಸಿ ಸಾಮಾಜಿಕ ಕ್ರಾಂತಿ ಮಾಡಿದವರು ನಾರಾಯಣ ಗುರು ಎಂದು ಬಣ್ಣಿಸಿದರು.ವಿದ್ಯೆಯನ್ನು ಪಡೆದು ಸ್ವತಂತ್ರರಾಗಿರಿ, ಸಂಘಟನೆಯಿಂದ ಶಕ್ತಿವಂತರಾಗಿರಿ ಎಂಬ ಸಂದೇಶ ಸಾರಿದರು. ಮನುಷ್ಯ ಜಾತಿಯಿಂದ ದೊಡ್ಡವನಾಗುವುದಿಲ್ಲ. ಬದಲಾಗಿ ಆತ ಬದುಕಿನ ನೀತಿಯಿಂದ, ರೀತಿಯಿಂದ ದೊಡ್ಡವನಾಗುತ್ತಾನೆ ಎಂದು ತೋರಿಸಿಕೊಟ್ಟವರು ನಾರಾಯಣ ಗುರು ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಕೇವಲ ಒಂದು ಸಮುದಾಯಕ್ಕೆ ಗುರು ಅಲ್ಲ. ಅವರು ಮಾನವ ಜನಾಂಗದ ಗುರು. ಸಾಮಾಜಿಕ ಕ್ರಾಂತಿಯ ಹರಿಕಾರ. ತಮ್ಮ ಆಧ್ಯಾತ್ಮಿಕ ಚಿಂತನೆ ಮೂಲಕ ಮತಾಂತರವನ್ನು ತಪ್ಪಿಸಿದರು. ಸಮಾನತೆಯನ್ನು ತರುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೋರಾಟ ಮಾಡಿದರು ಎಂದು ಅಭಿಪ್ರಾಯಪಟ್ಟರು.ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಮಾತನಾಡಿ, ಗುರು ಹಿರಿಯರು ಹಾಕಿಕೊಟ್ಟ ಸಲಹೆ-ಸೂಚನೆ, ಆಚಾರ-ವಿಚಾರ ಆ ಸಂಘ, ಸಮುದಾಯವಷ್ಟೇ ಅಲ್ಲದೇ ಎಲ್ಲಾ ಮನುಕುಲ ಪಾಲನೆ ಮಾಡಿ, ಅವರ ಆದರ್ಶಗಳನ್ನು ರೂಡಿಸಿಕೊಳ್ಳಿ ಎಂಬ ಉದ್ದೇಶದಿಂದ ಈ ಜಯಂತಿಗಳನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಇಂದಿಗೂ ಮೌಢ್ಯತೆ, ಮೂಢನಂಬಿಕೆ ಜೀವಂತವಾಗಿರುವುದು ನಾವು ಕಾಣಬಹಹುದು ಎಂದರು.
ಸಮಾಜದ ಜಿಲ್ಲಾಧ್ಯಕ್ಷ, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ್ ಮಾತನಾಡಿ, ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ, ರಾತ್ರಿ ಶಾಲೆ ತೆರೆದು ತಳ ಸಮುದಾಯಕ್ಕೂ ಶಿಕ್ಷಣ ಒದಗಿಸಿ ಒದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂಬ ಸಂದೇಶ ಸಾರಿದ ವ್ಯಕ್ತಿ ನಾರಾಯಣ ಗುರು. ಮಕ್ಕಳಿಗೆ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ರವಿಚಂದ್ರ, ಈಡಿಗ ಸಮಾಜದ ಗೌರವಾಧ್ಯಕ್ಷ ಎಚ್.ಶಂಕರ್, ಕಾರ್ಯದರ್ಶಿ ದೇವೇಂದ್ರಪ್ಪ, ಉಪಾಧ್ಯಕ್ಷ ಶಾಂತರಾಮ್, ಲಕ್ಷ್ಮಿ ಸಮಾಜದ ಬಂಧುಗಳು ಇದ್ದರು.
ನಾರಾಯಣ ಗುರುಗಳ ಸುಧಾರಣಾ ಚಳವಳಿ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಆಯಾಮಗಳನ್ನು ಪಡೆದುಕೊಂಡು ಕೇರಳದ ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ಅವರ ಆದರ್ಶಗಳು ಮತ್ತು ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ಜಾತಿ, ಧರ್ಮದ ಭೇದಗಳಿಲ್ಲದ ವಿಶ್ವಪ್ರಜ್ಞೆಯನ್ನು ಬೆಳೆಸಲು ಪ್ರೇರಣೆಯಾಗಿದೆ.ಕೆ.ಎಸ್.ಬಸವಂತಪ್ಪ, ಶಾಸಕ.