ತಾಲೂಕಿನ ಇಸಳೂರು ಗ್ರಾಮ ಪಂಚಾಯತಿಗೆ ಒಳಪಡುವ ನಾರಾಯಣಗುರು ನಗರ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ.
ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ: ಸಾರ್ವಜನಿಕರ ಆಕ್ರೋಶ
ಶಂಕರ ಜಿ. ಜಾವೂರ
ಕನ್ನಡಪ್ರಭ ವಾರ್ತೆ ಶಿರಸಿತಾಲೂಕಿನ ಇಸಳೂರು ಗ್ರಾಮ ಪಂಚಾಯತಿಗೆ ಒಳಪಡುವ ನಾರಾಯಣಗುರು ನಗರ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ.
ಇಲ್ಲಿನ ರಸ್ತೆ ಹಾಗೂ ಬೀದಿ ದೀಪಗಳನ್ನು ಅಳವಡಿಸುವಂತೆ ಈ ಹಿಂದೆ ಹಲವು ಬಾರಿ ಪಂಚಾಯಿತಿಗೆ ಮನವಿ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ನಮ್ಮ ಕಷ್ಟ ಯಾರಿಗೆ ಹೇಳಬೇಕೆಂದು ದಿಕ್ಕು ತೋಚದಂತಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಸುಸಜ್ಜಿತ ರಸ್ತೆ, ಚರಂಡಿ ವ್ಯವಸ್ಥೆಯಾಗಲಿ ಕಲ್ಪಿಸಲಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದಾರೆ. ಸಾರ್ವಜನಿಕರ ಹಿತ ಕಾಪಾಡುವಲ್ಲಿ ಅಸಡ್ಡೆ ತೋರುತ್ತಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಇಸಳೂರು ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿನ ರಸ್ತೆಗಳು ಮತ್ತು ಚರಂಡಿ ಸಂಪೂರ್ಣ ಹದಗೆಟ್ಟಿವೆ. ಸಾರ್ವಜನಿಕರು ಪಂಚಾಯಿತಿ ಸದಸ್ಯರಿಗೆ ಹೇಳಬೇಕೆಂದರೆ ಅವರ ಅಧಿಕಾರದ ಅವಧಿ ಸಂಪೂರ್ಣವಾಗಿ ಮುಗಿದುಹೋಗಿದೆ. ಹಾಗಾಗಿ ಸ್ಥಳೀಯರ ಗೋಳು ಕೇಳುವವರಿಲ್ಲದಂತಾಗಿದೆ. ಸರ್ಕಾರ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಿದೆ ಆದರೆ ಆ ಆಡಳಿತ ಅಧಿಕಾರಿ ಇವತ್ತಿನವರೆಗೂ ಸಾರ್ವಜನಿಕ ಸಮಸ್ಯೆಗೆ ಸ್ಪಂದನೆ ನೀಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ತಾಲೂಕಿನ ನಾರಾಯಣಗುರು ನಗರ 1ನೇ ಅಡ್ಡ ರಸ್ತೆ ಸೇರಿದಂತೆ ಅದರ ಸುತ್ತಮುತ್ತಲಿರುವ ಎಲ್ಲಾ ರಸ್ತೆಗಳು ಸಾರ್ವಜನಿಕ ಸಂಚಾರಕ್ಕೆ ಅಯೋಗ್ಯವಾಗಿವೆ. ಇದೇ ರಸ್ತೆಯಲ್ಲಿ ದೇವರಾಜ ಅರಸು ವಸತಿ ನಿಲಯವಿದ್ದು ಆ ವಸತಿ ನಿಲಯದ ಮುಂದೆ ಬೃಹದಾಕಾರದ ಹೊಂಡ ಬಿದ್ದು ನೀರು ತುಂಬಿಕೊಂಡಿದೆ.
ವಸತಿ ನಿಲಯದ ವಿದ್ಯಾರ್ಥಿಗಳು ದಿನಾಲು ಕಾಲೇಜಿಗೆ ಹೋಗಬೇಕಾದರೆ ಮತ್ತು ಬರಬೇಕಾದರೆ ಈ ಹೊಂಡವನ್ನು ದಾಟಿಯೇ ಹೋಗಬೇಕು. ರಾತ್ರಿ ಏನಾದರೂ ಈ ರಸ್ತೆಯಲ್ಲಿ ಸಂಚರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಿದೆ. ಅಪಾಯ ಸಂಭವಿಸುವುದಕ್ಕಿಂತ ಮುನ್ನ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಚರಂಡಿ ವ್ಯವಸ್ಥೆ ಹಾಗೂ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಸ್ಥಳಿಯ ನಿವಾಸಿಗಳು ಒತ್ತಾಯಿಸಿದ್ದಾರೆ.ನಾರಾಣಗುರು ನಗರ ಸೇರಿ ಅನೇಕ ಪ್ರಮುಖ ರಸ್ತೆಗಳಿಗೆ ಚರಂಡಿ ಸೇರಿದಂತೆ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಮುಂದಿನ ದಿನದಲ್ಲಿ ನಮ್ಮ ಕಾಂಗ್ರೆಸ್ ಸರಕಾರದಿಂದ ಅನುದಾನ ತಂದು ನಾರಾಯಣ ಗುರು ನಗರದ ಉಳಿದೆಲ್ಲ ರಸ್ತೆಗಳಿಗೆ ಚರಂಡಿ ಮತ್ತು ಟಾರ್ ಹಾಕಿಸುವ ಕೆಲಸ ಮಾಡುತ್ತೇನೆ. ಸದ್ಯ ಗುಂಡಿಬಿದ್ದ ಜಾಗದಲ್ಲಿ ಮಣ್ಣು ತುಂಬಿಸುವ ಕೆಲಸ ಮಾಡಲಾಗುವುದು ಎನ್ನುತ್ತಾರೆ ಶಾಸಕ ಭೀಮಣ್ಣ ನಾಯ್ಕ.ಸದ್ಯ ನಾನು ಚಾರ್ಜ್ ತಗೊಂಡು 3 ದಿನವಾಗಿದೆ. ಸ್ಥಳ ಪರಿಶೀಲನೆ ಮಾಡಿ ಗುಂಡಿ ಮುಚ್ಚುವ ಮತ್ತು ಬೀದಿ ದೀಪ ಹಾಕಿಸುವ ಕೆಲಸ ಅತ್ಯಂತ ಶೀಘ್ರ ಮಾಡಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸುಗಮವಾಗಿ ಸಂಚರಿಸಲು ಅನುಕೂಲ ಕಲ್ಪಿಸಿಕೊಡಲಾಗುವುದು ಎನ್ನುತ್ತಾರೆ ಇಸಳೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕುಮಾರ ವಾಸನ್.