ಸಾಮಾಜಿಕ ಸುಧಾರಣೆಯ ಹರಿಕಾರ ನಾರಾಯಣಗುರು: ಕೋಟೆಪ್ಪಗೋಳ

| Published : Aug 22 2024, 12:49 AM IST

ಸಾರಾಂಶ

Narayanaguru, the pioneer of social reform: Koteppagola

-ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಸಾಮಾಜಿಕ ಸುಧಾರಣೆಯ ಕ್ರಾಂತಿಗೆ ಕಾರಣರಾದ ನಾರಾಯಣಗುರು ಅವರು ಸಮಾಜ ಸುಧಾರಕರಾಗಿ ಒಂದು ಜಾತಿ, ಧರ್ಮದ ಗುರುವಲ್ಲ. ಅವರು ಲೋಕಗುರುವಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಹೇಳಿದರು.

ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಓರ್ವ ಸಮಾಜ ಸುಧಾರಕರಾಗಿ ಅವರನ್ನು ಕಂಡಾಗ ಅವರು ಒಂದು ಜಾತಿ, ಧರ್ಮದ ಗುರುವಲ್ಲ. ಅವರು ಲೋಕ ಗುರು. ಅವರು ಹೇಳಿದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮದ ಸಾರ. ಇಂದು ನಾರಾಯಣ ಗುರುಗಳ ಜಾತಿ ನಮಗೆ ಮುಖ್ಯವಲ್ಲ. ಅವರ ನೀತಿ ಮುಖ್ಯ. ಚತುರ್ವರ್ಣ ವ್ಯವಸ್ಥೆಯ ಕರಾಳ ಕತೆಯ ವಿರುದ್ಧದ ಹೋರಾಟವೇ ನಾರಾಯಣ ಗುರುಗಳ ಸಮಾಜ ಸುಧಾರಣೆ ಎಂದು ಹೇಳಿದರು.

ಬಸಲಿಂಗಪ್ಪ ಕಲಾಲ ಕೂಡ್ಲೂರು ಉಪನ್ಯಾಸ ನೀಡಿ, ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯುತ್ಸವ ಆಚರಣೆಯ ಸಡಗರದಲ್ಲಿ ನಾವಿದ್ದೇವೆ. ಇದು ಚರಿತ್ರೆಯನ್ನು ನೆನಪಿಸುವ ಆಚರಣೆಯೂ ಹೌದು. ನಾರಾಯಣ ಗುರುಗಳು ಒಂದು ಧರ್ಮದ, ಒಂದು ಜಾತಿಯ ಗುರುವಲ್ಲ ಎಂದರು.

ನಾರಾಯಣಗುರು ಹುಟ್ಟಿದ್ದು ಬ್ರಿಟಿಷ್ ಅರಸೊತ್ತಿಗೆಯ ಆಡಂಭರದ ಕಾಲದಲ್ಲಿ ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಬಾಲ್ಯವಿವಾಹ, ಗುಲಾಮಗಿರಿ, ಜೀತಪದ್ಧತಿ, ಜಮೀನ್ದಾರಿ ಪದ್ಧತಿ ಅನಿಷ್ಟ ಆಚರಣೆಗಳ ಅಮಾನುಷ ಪರಿಸ್ಥಿತಿ. ಆರಂಭದ ಗುರುಗಳಾದ ಮೂತ್ತ ಪಿಳ್ಳೆ ಆಶಾನ್, ಸುಂದರ ಪಿಳ್ಳೆ ಆಶಾನ್, ಇವರಿಂದ ಮಳೆಯಾಳ ಸಂಸ್ಕೃತ ಅಭ್ಯಾಸ, ಪುರಾಣ ಜ್ಞಾನ, ರಾಮಾಯಣ, ಭಾರತ, ಭಾಗವತವೇ ಮೊದಲಾದ ಧರ್ಮಗ್ರಂಥಗಳ ಜ್ಞಾನ ದೊರೆಯಿತು ಎಂದು ಮಾಹಿತಿ ನೀಡಿದರು.

ಅಜಲಾಪೂರ ಶಂಕರಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಮಹೇಂದ್ರ ಅನಪೂರ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ಉತ್ತರಾದೇವಿ ಮಠಪತಿ, ರಾಜ್ಯ ಆರ್ಯ ಈಡಿಗ ಸಮಾಜದ ಮುಖಂಡರಾದ ನಾಗರಾಜಗೌಡ ಮಾನಸಗಲ್, ಆರ್ಯ ಈಡಿಗ ಸಮಾಜದ ಜಿಲ್ಲಾ ಉಪಾಧ್ಯಕ್ಷ ದೇವಪ್ಪಗೌಡ ರಾಚನಹಳ್ಳಿ, ಜಿಲ್ಲಾ ಕಾರ್ಯಾಧ್ಯಕ್ಷ ಸೂರ್ಯಕಾಂತಗೌಡ ಕಟ್ಟಿಮನಿ, ಆರ್ಯ ಈಡಿಗ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಗುಂಡಗುರ್ತಿ, ಜಿಲ್ಲಾ ಖಜಾಂಚಿ ವೆಂಕಟೇಶ ಬದ್ದೇಪಲ್ಲಿ, ಯುವ ಘಟಕ ಜಿಲ್ಲಾಧ್ಯಕ್ಷ ಬಾಲಾಜಿ ಪೊಲೀಸ್, ಯುವ ಘಟಕ ತಾಲೂಕಾಧ್ಯಕ್ಷರಾದ ರಾಘವೇಂದ್ರ ಕಲಾಲ ಸೈದಾಪುರ, ಪ್ರಮುಖರಾದ ನಗರಸಭೆ ಮಾಜಿ ಸದಸ್ಯರಾದ ಪ್ರಭಾವತಿ ಕಲಾಲ, ಮಲ್ಲಿಕಾರ್ಜುನ ಪೊಲೀಸ್, ಬಸವಲಿಂಗಪ್ಪ ಕಲಾಲ ಹಾಲಗೇರಾ ಇದ್ದರು.

-------

21ವೈಡಿಆರ್2: ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.