ಗೋಪಾಲ ಗಾಣಿಗರಿಗೆ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ

| Published : Nov 06 2024, 12:33 AM IST

ಸಾರಾಂಶ

ಯಕ್ಷಗಾನ ಕಲಾಕೇಂದ್ರ ಆಶ್ರಯದಲ್ಲಿ ಹೆರೆಂಜಾಲು ಗೋಪಾಲ ಗಾಣಿಗರಿಗೆ ಯಕ್ಷಗಾನ ಸಪ್ತಾಹ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ

ಇಲ್ಲಿನ ಯಕ್ಷಗಾನ ಕಲಾಕೇಂದ್ರ ಆಶ್ರಯದಲ್ಲಿ ಹೆರೆಂಜಾಲು ಗೋಪಾಲ ಗಾಣಿಗರಿಗೆ ಯಕ್ಷಗಾನ ಸಪ್ತಾಹ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗಾಪುರ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಪ್ರಕಾಶ್ ಹಂದೆ, ಯಕ್ಷಗಾನ ಕಲಾವಿದರು ದೈಹಿಕ ಶ್ರಮದ ಮೂಲಕ ಕೆಲಸ ಮಾಡುವವರು. ಹೀಗಾಗಿ ಕಲಾವಿದರಿಗೆ ಆರೋಗ್ಯದ ಬಗ್ಗೆ ಕಾಳಜಿ ಅತೀ ಅಗತ್ಯ ಮತ್ತು ಕಾಲ-ಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಿ ಸಮಸ್ಯೆಗಳಿದ್ದರೆ ಪರಿಹರಿಸಿಕೊಳ್ಳುವುದು ಅಗತ್ಯ ಎಂದರು.

ಉಡುಪಿ ಎಂಜಿಎಂ ಕಾಲೇಜು ಪ್ರಾಶುಂಪಾಲ ಲಕ್ಷ್ಮೀ ನಾರಾಯಣ ಕಾರಂತ ಶುಭ ಹಾರೈಸಿದರು. ಈ ಸಂದರ್ಭ ಹಿರಿಯ ಯಕ್ಷಗಾನ ಭಾಗವತ ಹೆರೆಂಜಾಲು ಗೋಪಾಲ ಗಾಣಿಗರಿಗೆ ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಶುಂಪಾಲ ಜಗದೀಶ ನಾವಡ, ಉಪ್ಪೂರರ ಪುತ್ರ ದಿನೇಶ ಉಪ್ಪೂರ, ಬ್ರಹ್ಮಾವರ ಸರ್ಕಾರಿ ಪ.ಪೂ. ಕಾಲೇಜು ಪ್ರಾಶುಂಪಾಲ ರವೀಂದ್ರ ಉಪಾಧ್ಯ, ಕಲಾಕೇಂದ್ರದ ಸಲಹಾ ಸಮಿತಿ ಸದಸ್ಯ ವಾಸುದೇವ ಕಾರಂತರು ಇದ್ದರು.

ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಮಹಾಲಕ್ಷ್ಮೀ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ ನಿರೂಪಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಛಾಯಾ ತರಂಗಿಣಿ ಸಂಗೀತ ಶಾಲೆ ಕೋಟ ಇವರಿಂದ ಗಾನ ವೈಭವ ಸಭಾ ಕಾರ್ಯಕ್ರಮ ನಡೆಯಿತು. ನಂತರ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವ ರಂಗ ಪ್ರದರ್ಶನ ಹಾಗೂ ಹಿರಿಯ ಕಲಾವಿದರಿಂದ ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಂದ ನಿರ್ದೇಶಿಸಲ್ಪಟ್ಟ ಹೊಸ್ತೋಟ ಮಂಜುನಾಥ ಭಟ್ಟರ ರಚಿತ ‘ಪ್ರದ್ಯುಮ್ನ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಿತು.