ಸಾರಾಂಶ
ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾದಾರ ಚೆನ್ನಯ್ಯ ಶ್ರೀಗಳಿಗೆ ಪಕ್ಷದ ವತಿಯಿಂದ ಆಹ್ವಾನ ನೀಡಿಲ್ಲ ಎಂಬುದಾಗಿ ಕೇಂದ್ರ ಸಚಿವರೂ ಆಗಿರುವ ಸಂಸದ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯುವರೆಂಬ ವದಂತಿಗಳಿಗೆ ಕೇಂದ್ರ ಸಚಿವ ಹಾಗೂ ಮಾದಿಗ ಸಮುದಾಯದ ಪ್ರಭಾವಿ ಮುಖಂಡ ಎ.ನಾರಾಯಣಸ್ವಾಮಿ ತೆರೆ ಎಳೆದಿದ್ದಾರೆ.ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾದಾರ ಶ್ರೀಗೆ ಯಾರೂ ಆಹ್ವಾನ ನೀಡಿಲ್ಲ, ಅವರನ್ನು ಚುನಾವಣೆಗೆ ಕರೆತರಲು ಯಾರೂ ಚರ್ಚಿಸಿಲ್ಲ. ನೀವೇ ಸ್ಪರ್ಧೆ ಮಾಡಿ ಎಂದು ಅವರ ಬಳಿ ಯಾರೂ ವಿನಂತಿಸಿಲ್ಲ. ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿಯಲ್ಲಿ ಇನ್ನು ಚರ್ಚೆಯೇ ಆಗಿಲ್ಲವೆಂದರು.
ಮಾದಾರ ಗುರುಪೀಠ ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಮಾತ್ರ ಸೀಮಿತವಲ್ಲ. ಜಾತ್ಯತೀತ, ಪಕ್ಷಾತೀತವಾಗಿ ಎಲ್ಲ ಸಮುದಾಯ, ನಾಗರಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದುವರಿಯುತ್ತಿದೆ. ರಾಜಕೀಯಕ್ಕಾಗಿ ಯಾವುದೇ ಕಾರಣಕ್ಕೂ ಮಠವನ್ನು ಬಳಸಿಕೊಳ್ಳುವುದಿಲ್ಲ. ಮಾದಾರಶ್ರೀಗಳು ಸರ್ವ ಪಕ್ಷ, ಧರ್ಮ, ಸಮುದಾಯಗಳಿಗೂ ಸಂಬಂಧಿಸಿದವರಾಗಿದ್ದಾರೆ ಎಂದರು.