ಸಾರಾಂಶ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ಬನ್ನಿ ಎಂದು ಭಿಕ್ಷೇ ಬೇಡುತ್ತಿದ್ದಾರೆಂಬ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಹೇಳಿಕೆಗೆ ಕೆಪಿಸಿಸಿ ರಾಜ್ಯ ಸಂಯೋಜಕ ಸಿ.ಶಿವುಯಾದವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ಬನ್ನಿ ಎಂದು ಭಿಕ್ಷೇ ಬೇಡುತ್ತಿದ್ದಾರೆಂಬ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಹೇಳಿಕೆಗೆ ಕೆಪಿಸಿಸಿ ರಾಜ್ಯ ಸಂಯೋಜಕ ಸಿ.ಶಿವುಯಾದವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2ನೇ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ 3ನೇ ಬಾರಿಗೂ ಪ್ರಧಾನಿಯಾಗಬೇಕೆಂದು ದೇಶದಲ್ಲಿ ಜಪ ತಪ ನಡೆಯುತ್ತಿದೆ ಎಂದು ಹೇಳಿಕೊಳ್ಳುತ್ತಿರುವ ಎ.ನಾರಾಯಣಸ್ವಾಮಿಗೆ ಭದ್ರಾಮೇಲ್ದಂಡೆ ಯೋಜನೆಗಾಗಿ ಕಳೆದ 22 ದಿನಗಳಿಂದಲೂ ರೈತರು ಧರಣಿ ನಡೆಸುತ್ತಿರುವುದು ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ರೈತರು ದೆಹಲಿಯಲ್ಲಿ ಚಳುವಳಿ ನಡೆಸುತ್ತಿದ್ದಾರೆ. ರೈತ ವಿರೋಧಿ, ಸಂವಿಧಾನ ವಿರೋಧಿ, ಭ್ರಷ್ಟ ಸರ್ಕಾರ ಬಿಜೆಪಿಯನ್ನು ತೊಲಗಿಸುವುದು ನಮ್ಮ ಉದ್ದೇಶ.
ನರೇಂದ್ರ ಮೋದಿ ಚಿತ್ರದುರ್ಗಕ್ಕೆ ಬಂದಾಗ ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಿಸುವುದಾಗಿ ಭರವಸೆ ನೀಡಿದ್ದನ್ನು ಮರೆತುಬಿಟ್ಟಿದ್ದಾರೆ. ಕಾಡುಗೊಲ್ಲರನ್ನು ಪರಿಶಿಷ್ಠ ವರ್ಗಕ್ಕೆ ಸೇರಿಸುತ್ತೇವೆಂದು ನೀಡಿದ ವಾಗ್ದಾನ ಎಲ್ಲಿಗೋಯಿತು.
ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ 5300 ಕೋಟಿ ರು.ಗಳನ್ನು ಮಂಜೂರು ಮಾಡಿ ಇನ್ನು ಏಕೆ ಬಿಡುಗಡೆಗೊಳಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಸರ್ವಾಧಿಕಾರಿ ಮೋದಿ ಎದುರು ನಿಲ್ಲಲು ಯಾರೊಬ್ಬ ಸಚಿವರು, ಸಂಸದರಿಗೆ ಶಕ್ತಿಯಿಲ್ಲ ಎನ್ನುವುದು ಗೊತ್ತಾಗಿದೆ. ಸಚಿವರ ಯಾವ ಸಲಹೆ ಸೂಚನೆಗಳನ್ನು ಸ್ವೀಕರಿಸುತ್ತಿಲ್ಲ. ರೈತರು, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರ ಅಭಿವೃದ್ಧಿಯಾಗಿಲ್ಲ. ಸಂವಿಧಾನ ಬಾಹಿರ ಕೆಲಸ ಮಾಡುತ್ತ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕಪಾಠ ಕಲಿಸಲಿದ್ದಾರೆ.
ಐಟಿ, ಇಡಿ, ಸಿಬಿಐ ಬಿಟ್ಟು ಕಾಂಗ್ರೆಸ್ ಅವರನ್ನು ಹೆದರಿಸುವ ಸಂಸ್ಕೃತಿ ಇನ್ನಾದರು ನಿಲ್ಲಿಸಿ. ನಾಲ್ಕು ನೂರು ಸೀಟು ಗೆಲ್ಲುತ್ತೇವೆಂದು ಹೇಳಿಕೊಳ್ಳುತ್ತಿರುವ ಬಿಜೆಪಿಗೆ ಇನ್ನೂರು ಸೀಟು ಬರುವುದಿಲ್ಲ. ವಿರೋಧಿಗಳನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಕುತಂತ್ರ ತುಂಬಾ ದಿನ ನಡೆಯುವುದಿಲ್ಲ ಎಂದು ಶಿವುಯಾದವ್ ಹೇಳಿದರು. ಚಿದಾನಂದಮೂರ್ತಿ ಇದ್ದರು.