ಸಾರಾಂಶ
ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆ, ಜನರಿಗೆ ಉದ್ಯೋಗ ಹಾಗೂ ಬಾಳಿಕೆ ಬರುವ ಆಸ್ತಿಗಳನ್ನು ಸೃಜನೆ ಮಾಡುವ ಉದ್ದೇಶದಿಂದ ನರೇಗಾ ದಿವಸವನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಹೇಳಿದರು.
- ಹಿರೇಗೌಜ ಗ್ರಾಮದ ಕೆರೆಯ ಬಳಿ ನರೇಗಾ ದಿವಸ ಆಚರಣೆ, 100 ದಿನ ಕೂಲಿ ಕೆಲಸ ಪೂರೈಸಿದ ಕಾರ್ಮಿಕರಿಗೆ ಸನ್ಮಾನ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆ, ಜನರಿಗೆ ಉದ್ಯೋಗ ಹಾಗೂ ಬಾಳಿಕೆ ಬರುವ ಆಸ್ತಿಗಳನ್ನು ಸೃಜನೆ ಮಾಡುವ ಉದ್ದೇಶದಿಂದ ನರೇಗಾ ದಿವಸವನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಹೇಳಿದರು. ತಾಲೂಕಿನ ಹಿರೇಗೌಜ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿ ಸಂಬಂಧ ಕೆರೆ ಬಳಿ ನರೇಗಾ ದಿವಸ್ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣಾಭಿವೃದ್ಧಿಯ ಮಹತ್ತರ ಯೋಜನೆಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಒಂದಾಗಿದೆ. ಈ ವರ್ಷ ಬರದ ಪರಿಸ್ಥಿತಿ ಇರುವುದರಿಂದ ನಮ್ಮ ಜಿಲ್ಲೆ ಮಾನವ ದಿನಗಳ ಸೃಜನೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು. ಜಿಲ್ಲೆಗೆ ನೀಡಿರುವ ಮಾನವ ದಿನಗಳ ಗುರಿಯಲ್ಲಿ ಶೇ. 98 ರಷ್ಟು ಪ್ರಗತಿ ಸಾಧಿಸಲಾಗಿದೆ. ಹೀರೆಗೌಜ ಗ್ರಾಮ ಪಂಚಾಯಿತಿ ನರೇಗಾ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಿರುವ ಜೊತೆಗೆ ಅಭಿವೃದ್ಧಿ ಪಡಿಸುತ್ತಿರುವ ಕೆರೆ ಬಳಿ ನರೇಗಾ ದಿನವನ್ನು ಆಚರಿಸುತ್ತಿರುವುದು ಖುಷಿ ವಿಚಾರ ಎಂದು ತಿಳಿಸಿದರು. ಜಿಪಂ ಉಪ ಕಾರ್ಯದರ್ಶಿ ಅತಿಖ್ ಪಾಷಾ ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶದ ದುಡಿಯುವ ಕುಟುಂಬಗಳಿಗೆ 100 ದಿನಗಳ ಕೆಲಸ ನೀಡುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೆರೆ, ಕಾಲುವೆ, ಕಲ್ಯಾಣಿ, ಕೃಷಿ ಹೊಂಡ ಸೇರಿದಂತೆ ಜಲ ಸಂಪನ್ಮೂಲಗಳ ಅಭಿವೃದ್ಧಿ ಹಾಗೂ ಚರಂಡಿ, ರಸ್ತೆ, ಅಂಗನ ವಾಡಿ ಕಟ್ಟಡ, ಶಾಲಾ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ನರೇಗಾ ಯೋಜನೆಯಡಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಹಿರೇಗೌಜ ಗ್ರಾಮ ಪಂಚಾಯ್ತಿ ಸದಸ್ಯ ಶಿವಕುಮಾರ್ ಮಾತನಾಡಿ, ನರೇಗಾ ಯೋಜನೆ 2006 ರಲ್ಲಿ ಅನುಷ್ಠಾನ ಗೊಂಡಿದೆ. ನರೇಗಾ ದಿನದ ಮುಖ್ಯ ಉದ್ದೇಶ ನರೇಗಾ ಯೋಜನೆಯಡಿ ಕಾರ್ಯನಿರ್ವ ಹಿಸುವವರನ್ನು ಗುರುತಿಸಿ ಸನ್ಮಾಸಿಸುವ ದಿನ. ಈ ದಿನ ಅವರಿಗೆ ಆರೋಗ್ಯ ತಪಾಸಣೆ ಹಾಗೂ ಗೌರವಿಸುವ ಕಾರ್ಯ ಕೈಗೊಂಡಿದೆ ಎಂದು ಹೇಳಿದರು. ಇದೇ ವೇಳೆ ಕೆರೆ ದಂಡೆ ಮೇಲೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಉಪ ಕಾರ್ಯದರ್ಶಿಗಳು ಸಸಿಯನ್ನು ನೆಟ್ಟರು. ಕಾಮಗಾರಿ ಸ್ಥಳದಲ್ಲಿ ನೆರೆದಿದ್ದ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಹಾಗೂ 100 ದಿನಗಳ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಸನ್ಮಾನಿಸಿ, ಸಂವಾದ ನಡೆಸಲಾಯಿತು. ಶ್ರಮದಾನವೂ ಕೂಡ ನಡೆಯಿತು. ಇದರಲ್ಲಿ ಅಧಿಕಾರಿಗಳು ಸಹ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಎಸ್.ಕೆ.ಪರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ, ಸದಸ್ಯರಾದ ಹಾಲೆಗೌಡ, ಸುರೇಶ್, ಪುಷ್ಪಾ ಶಾಂತಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್. ರಾಜ್‌ಕುಮಾರ್ ಹಾಜರಿದ್ದರು. 2 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ಕೆರೆಯ ಬಳಿ ಶುಕ್ರವಾರ ನಡೆದ ನರೇಗಾ ದಿವಸ್ ಕಾರ್ಯಕ್ರಮವನ್ನು ಜಿಪಂ ಸಿಇಓ ಡಾ. ಗೋಪಾಲಕೃಷ್ಣ ಅವರು ಉದ್ಘಾಟಿಸಿದರು. ಶಿವಕುಮಾರ್, ಮಂಜುಳಾ, ಪರಮೇಶ್ ಇದ್ದರು.