ಸಾರಾಂಶ
ಕೇಕ್ ಕತ್ತರಿಸಿ ಕಾರ್ಮಿಕ ದಿನ ಆಚರಣೆ
ಕನ್ನಡಪ್ರಭ ವಾರ್ತೆ ಕುಕನೂರುತಾಲೂಕಿನ ಬಳಗೇರಿ ಗ್ರಾಮದಲ್ಲಿ ಕಾರ್ಮಿಕ ದಿನವನ್ನು ನರೇಗಾ ಕೂಲಿಕಾರರು ಹಬ್ಬದಂತೆ ಆಚರಿಸಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ತಾಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಮಾತನಾಡಿ, ನರೇಗಾ ಯೋಜನೆಯೂ ಗ್ರಾಮೀಣ ಪ್ರದೇಶದ ಬಡ ಕೂಲಿಕಾರರ ಆರ್ಥಿಕ ಜೀವನದ ಭದ್ರ ಬುನಾದಿಯಾಗಿದೆ. ನರೇಗಾ ಕೂಲಿಕಾರರು ಪ್ರತಿನಿತ್ಯ ವಿಭಿನ್ನ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಗ್ರಾಮಸ್ಥರೆಲ್ಲರೂ ಸೇರಿ ಒಂದು ಕಡೆ ಕೆಲಸ ಮಾಡುವುದರಿಂದ ಗ್ರಾಮೀಣ ಪ್ರದೇಶದ ಸೊಗಡನ್ನು ನಾವು ನರೇಗಾ ಕಾಮಗಾರಿಗಳಲ್ಲಿ ಕಾಣಬಹುದು. ಇದರಿಂದಾಗಿ ಆರ್ಥಿಕ ಸಧೃಡತೆಯ ಜತೆಗೆ ಸಾಮಾಜಿಕ ಜೀವನದಲ್ಲಿಯೂ ಸಹ ಬೆರೆಯುತ್ತಾ ಬೆಸರವಿಲ್ಲದೇ ನರೇಗಾ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬಳಗೇರಿ ಗ್ರಾಪಂಯಲ್ಲಿ ಪ್ರತೀವರ್ಷ ಸಾವಿರಾರು ಕೂಲಿಕಾರರು ಕೆಲಸ ಮಾಡುತ್ತಾ ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ ಎಂದರು.ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ಕೂಲಿಕಾರರು ವಲಸೆ ಹೊಗಬಾರದೆಂದು ಜಾರಿಯಾದ ಮಹಾತ್ವಾಕಾಂಕ್ಷಿ ಯೋಜನೆ. ಒಂದು ಕುಟುಂಬಕ್ಕೆ 100 ದಿನಗಳ ಖಾತ್ರಿ ಕೆಲಸವನ್ನು ಗ್ರಾಪಂಯಿಂದ ನೀಡಲಾಗುತ್ತದೆ. ಅದನ್ನು ಎಲ್ಲರೂ ಪಡೆದುಕೊಳ್ಳಬೇಕು. ಅದೇ ರೀತಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ₹316 ರಿಂದ 349ಕ್ಕೆ ಕೂಲಿ ಏರಿದ್ದು, ಇದರಿಂದಾಗಿ ಗ್ರಾಮೀಣ ಪ್ರದೇಶದ ಒಂದು ಕುಟುಂಬ ಅಂದರೆ (ಕನಿಷ್ಟ ಇಬ್ಬರು) ಒಂದು ದಿನ ನರೇಗಾ ಕಾಮಗಾರಿ ನಿರ್ವಹಿಸಿದರೆ ₹698 ಕೂಲಿ ದೊರೆಯುತ್ತದೆ. ಅದಕ್ಕಾಗಿ ಗ್ರಾಮೀಣ ಪ್ರದೇಶದ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಕಾಮಗಾರಿಯಲ್ಲಿ ತೊಡಗಬೇಕು ಮತ್ತು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳಲ್ಲಿ ಪಾಲ್ಗೊಳ್ಳಲು ಸಲಹೆ ನೀಡಿದರು.
ನಂತರ ಗ್ರಾಮ ಕಾಯಕ ಮಿತ್ರರು ಚುನಾವಣಾ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಮತದಾರರ ಪ್ರತಿಜ್ಞಾ ವಿಧಿ ಭೋಧನೆ ಮಾಡಿದರು.ಗ್ರಾಪಂ ಬಿಲ್ ಕಲೆಕ್ಟರ್ ನಿಂಗಪ್ಪ, ಕಂಪ್ಯೂಟರ್ ಅಪರೇಟರ್ ಗವಿ ಪಟ್ಟಣಶೇಟ್ಟಿ, ಬಿ.ಎಫ್.ಟಿ ಮಂಗಳೇಶ್, ಗ್ರಾಪಂ ಸಿಬ್ಬಂದಿ ಬಸವರಾಜ, ಕಾಯಕ ಬಂಧುಗಳು, ಕೂಲಿಕಾರರು ಇದ್ದರು.