ಸಾರಾಂಶ
ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿರುವಾಗ ಜಾರಿಗೆ ಬಂದ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಗ್ರಾಮಗಳ ಅಭಿವೃದ್ಧಿ ಜತೆಗೆ ಬಡವರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗುತ್ತಿದೆ ಎಂದು ಶಾಸಕ ಟಿಬಿ ಜಯಚಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿರುವಾಗ ಜಾರಿಗೆ ಬಂದ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಗ್ರಾಮಗಳ ಅಭಿವೃದ್ಧಿ ಜತೆಗೆ ಬಡವರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗುತ್ತಿದೆ ಎಂದು ಶಾಸಕ ಟಿಬಿ ಜಯಚಂದ್ರ ಹೇಳಿದರು. ಅವರು ಗುರುವಾರ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಸುಮಾರು 85 ಲಕ್ಷ ರು ವೆಚ್ಚದಲ್ಲಿ ಹೈಟೆಕ್ ಮಾದರಿಯಲ್ಲಿ ನಿರ್ಮಾಣವಾಗಿರುವ ಗ್ರಾಮ ಪಂಚಾಯತಿ ನೂತನ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಉದ್ಯೋಗಖಾತ್ರಿ ಯೋಜನೆ ಇಡೀ ಪ್ರಪಂಚದಲ್ಲಿ ಮೆಚ್ಚುವಂತದ್ದು, ಮಹಾತ್ಮ ಗಾಂಧೀಜಿಯವರ ಕನಸು ಹಳ್ಳಿಗಳ ಅಭಿವೃದ್ಧಿಯಾದರೆ ರಾಮ ರಾಜ್ಯ ಸಾಧ್ಯ ಎಂಬುದು ಈ ನಿಟ್ಟಿನಲ್ಲಿ ತಾವರೆಕೆರೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಪಿಡಿಓ ಹಾಗೂ ತಾ. ಪಂ ಕಾರ್ಯ ನಿರ್ವಹಣಾ ಅಧಿಕಾರಿಗಳು ಎಲ್ಲರೂ ಶ್ರಮ ವಹಿಸಿ ಉತ್ತಮ ರೀತಿಯಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.ಜಿ.ಪಂ. ಸಿಇಓ ಪ್ರಭು ಮಾತನಾಡಿ ಗ್ರಾಮ ಪಂಚಾಯಿತಿಗಳ ಸಮಗ್ರ ಆಡಳಿತದ ದೃಷ್ಠಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಶಾಲೆಗಳು, ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು, ಇದರೊಂದಿಗೆ ಗ್ರಾಮಗಳ ಶುಚಿತ್ವ, ರಸ್ತೆ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಅಬಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಹಾಗೂ ಅಧಿಕಾರಿ ಸಿಬ್ಬಂದಿಗಳು ಎಲ್ಲರೂ ಸೇರಿ ಪ್ರತಿ ವರ್ಷ ಒಂದೊಂದು ವಲಯವನ್ನು ತೆಗೆದುಕೊಂಡು ಅದಕ್ಕೆ ಹೊಸ ಸ್ವರೂಪ ಕೊಡಲು ಕೆಲಸ ಮಾಡಬೇಕು. ಅಂತಹ ಕಾರ್ಯದಲ್ಲಿ ತಾವರೆಕೆರೆ ಗ್ರಾಮ ಪಂಚಾಯಿತಿ ಮುಂಚೂಣಿಯಲ್ಲಿದ್ದು ಮಾದರಿಯಾದ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಿದ್ದಾರೆ ಎಂದರು.ತಾಲೂಕಿನಲ್ಲಿ ತಾವರೆಕೆರೆ ಗ್ರಾ.ಪಂ. ಉತ್ತಮ ಕಟ್ಟಡ ನಿರ್ಮಿಸಿದ್ದು, ಇದರ ಜೊತೆಗೆ ರತ್ನಸಂದ್ರ ಗ್ರಾಮ ಪಂಚಾಯಿತಿ ಕಟ್ಟಡ ವಿಶೇಷವಾದ ವಿನ್ಯಾಸದಲ್ಲಿ ನಿರ್ಮಾಣವಾಗುತ್ತಿದೆ. ಸೀಬಿ ಗ್ರಾಮ ಪಂಚಾಯಿತಿ ಕಟ್ಟಡ ಚಿಟ್ಟೆಯ ಆಕಾರದಲ್ಲಿ ನಿರ್ಮಾಣವಾಗುತ್ತಿದೆ. ಹೀಗೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಉತ್ತಮವಾದ ಕಟ್ಟಡಗಳಿರಬೇಕು, ಜನಸ್ನೇಹಿಯಾಗಿ, ಜನಗಳನ್ನ ಕೈ ಬೀಸಿ ಕರೆದು ಕೆಲಸ ಮಾಡಿಕೊಡುವ ಮುಕ್ತವಾದ ಹಾಗೂ ಸ್ವಚ್ಛವಾದ ವಾತವರಣ ಇರಬೇಕು ಎಂಬ ಸದಾಶಯದಿಂದ ಕೆಸಗಳನ್ನು ಮಾಡುತ್ತಿದ್ದೇವೆ, ನರೇಗಾ ಯೋಜನೆಯನ್ನ ಎಲ್ಲರೂ ಸದ್ಭಳಕೆ ಮಾಡಿಕೊಂಡು, ವೈಯಕ್ತಿಕ ಕಾಮಗಾರಿಗಳನ್ನ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು. ತಾವರೆಕೆರೆ ಪಿಡಿಒ ನಾಗರಾಜು ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸಗಳು ಸರಾಗವಾಗಿ ನಡೆಯಲು ಆಡಳಿತ ಮಂಡಳಿ ಸಹಕಾರ ಹಾಗೂ ಅಧಿಕಾರಿಗಳ ಮಾರ್ಗದರ್ಶನ ಅಗತ್ಯ. ಈ ನಿಟ್ಟಿನಲ್ಲಿ ಜಿ.ಪಂ. ಸಿಇಓ ಪ್ರಭು ಅವರು, ತಾ.ಪಂ. ಇಓ ಹರೀಶ್ ಅವರು ಹಾಗೂ ಗ್ರಾ.ಪಂ. ಆಡಳಿತ ಮಂಡಳಿಯ ಎಲ್ಲರೂ ಸಹಕಾರ ನೀಡಿದ್ದರಿಂದ ಉತ್ತಮ ಕಟ್ಟಡ ನಿರ್ಮಾಣ ಸಾಧ್ಯವಾಯಿತು ಎಂದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಕವಿತ, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಕನಕಪ್ಪ ಮೇಲಸಕ್ರಿ, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್, ಗ್ರಾಪಂ ಕಾರ್ಯದರ್ಶಿ ಸೌಹಾರ್ದ ಗ್ರಾಪಂ ಉಪಾಧ್ಯಕ್ಷ ತಿಮ್ಮಯ್ಯ, ಸದಸ್ಯರಾದ ರಾಜಮ್ಮ, ಸತ್ಯಭಾಮ, ಟಿ.ಸಿ.ಎಸ್. ಕುಮಾರ ನಾಯಕ, ಮಂಜಮ್ಮ, ರಾಜು, ಟಿಸಿ ನಾಗರತ್ನಮ್ಮ, ಪುಟ್ಟಮ್ಮ, ಪಿ.ಎನ್.ಸುಷ್ಮಾ ಯಶೋಧರ ಗೌಡ, ಮುಖಂಡರಾದ ಶಿವು ಚಂಗಾವರ, ಬಲರಾಮ್ ಸೇರಿದಂತೆ ಹಲವರು ಹಾಜರಿದ್ದರು.