ಸಾರಾಂಶ
ಗಟ್ಟಿಮುಟ್ಟಾದ ಯುವಕರು ದುಡಿದು ತಿನ್ನಲು ಹಿಂದೆ ಮುಂದೆ ನೋಡುವ ಇಂದಿನ ದಿನಗಳಲ್ಲಿ ವಯಸ್ಸು ಎಂಬುದು ದೇಹಕ್ಕೆ ಮಾತ್ರವೇ ಹೊರತು ದುಡಿದು ತಿನ್ನುವ ಛಲ, ದಿಟ್ಟತನ ಇದ್ದರೆ ಅದು ಲೆಕ್ಕಕ್ಕೆ ಬರುವುದಿಲ್ಲ. ಇದಕ್ಕೆ ತಾಲೂಕಿನ ಉಕ್ಕುಂದ ಗ್ರಾಮದ ವೃದ್ಧ ಕೂಲಿ ಕಾರ್ಮಿಕ ನೀಲಪ್ಪ ಮಾಚಪ್ಪ ಕಾನಬಸಣ್ಣನವರ (65) ಒಂದು ಉತ್ತಮ ಉದಾಹರಣೆಯಾಗಿದ್ದಾರೆ.
ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ಗಟ್ಟಿಮುಟ್ಟಾದ ಯುವಕರು ದುಡಿದು ತಿನ್ನಲು ಹಿಂದೆ ಮುಂದೆ ನೋಡುವ ಇಂದಿನ ದಿನಗಳಲ್ಲಿ ವಯಸ್ಸು ಎಂಬುದು ದೇಹಕ್ಕೆ ಮಾತ್ರವೇ ಹೊರತು ದುಡಿದು ತಿನ್ನುವ ಛಲ, ದಿಟ್ಟತನ ಇದ್ದರೆ ಅದು ಲೆಕ್ಕಕ್ಕೆ ಬರುವುದಿಲ್ಲ. ಇದಕ್ಕೆ ತಾಲೂಕಿನ ಉಕ್ಕುಂದ ಗ್ರಾಮದ ವೃದ್ಧ ಕೂಲಿ ಕಾರ್ಮಿಕ ನೀಲಪ್ಪ ಮಾಚಪ್ಪ ಕಾನಬಸಣ್ಣನವರ (65) ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಗ್ರಾಮದಲ್ಲಿ ವೃದ್ಧ ನೀಲಪ್ಪ ಜಮೀನು ಕೆಲಸಕ್ಕೆ ಬರುತ್ತೇನೆ ಎಂದರೂ ರೈತರು ಆತನಿಗೆ ಕೆಲಸಕ್ಕೆ ಬರಬೇಡ ಎಂದು ಹೇಳುತ್ತಿದ್ದರು. ನಿನಗೆ ವಯಸ್ಸಾಗಿದ್ದು ನಮ್ಮ ಜಮೀನಿನಲ್ಲಿ ಕೆಲಸ ಮಾಡಲು ನಿನ್ನಿಂದ ಸಾಧ್ಯವಾಗುವುದಿಲ್ಲ ಎನ್ನುತ್ತಿದ್ದರು. ಎಲ್ಲರಿಂದಲೂ ಇಂತಹ ಮಾತುಗಳನ್ನು ಕೇಳಿ, ಕೇಳಿ ಬೇಸತ್ತ ನೀಲಪ್ಪನು ಗಿಡ, ಮರಗಳನ್ನು ಕಡಿದು ಕಟ್ಟಿಗೆಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದನು. ಬಂದ ಆದಾಯದಲ್ಲಿ ಬದುಕು ಸಾಗಿಸುವುದು ದುಸ್ತರವಾಗಿತ್ತು. ಆಸರೆಯಾದ ನರೇಗಾ: ನೀಲಪ್ಪನಿಗೆ ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದು ಎಲ್ಲರಿಗೂ ಮದುವೆಯಾಗಿದೆ. ಈತನಿಗೆ ಯಾವುದೇ ಜಮೀನು ಇರದಿರುವುದರಿಂದ ಕೂಲಿ ಮಾಡಿ ಜೀವನ ಸಾಗಿಸಲು ತುಂಬಾ ಕಷ್ಟಕರವಾಗಿತ್ತು. ಕೆಲಸಕ್ಕಾಗಿ ತುಂಬಾ ಕಷ್ಟ ಪಡುತ್ತಿರುವಾಗ ಬದುಕಿನ ಆಶಾಕಿರಣದಂತೆ ನರೇಗಾ ಯೋಜನೆ ಆಸರೆಯಾಯಿತು. ಹೀಗಾಗಿ ಅವನು ಕೆಲಸಕ್ಕಾಗಿ ಬೇರೆಯವರ ಬಳಿ ಅಂಗಲಾಚುವುದು ತಪ್ಪಿತು. ಕಳೆದ ಎರಡು ವರ್ಷಗಳಿಂದ ನರೇಗಾ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ವರ್ಷಕ್ಕೆ ರು.15000 ರಿಂದ ರು.16000 ನರೇಗಾ ಕೂಲಿ ಹಣ ನೀಲಪ್ಪನ ಖಾತೆಗೆ ಜಮಾ ಆಗಿದೆ. ಹೀಗಾಗಿ ಆತನು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ. ಪ್ರತಿ ತಿಂಗಳು ವೃದ್ಧಾಪ್ಯ ವೇತನದ ಹಣ ಹಾಗೂ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿದ ಹಣದಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ನನ್ನ ಪತ್ನಿಯ ಔಷಧಿಗೆ ಹಾಗೂ ಮೊಮ್ಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಅನುಕೂಲಕರವಾಗಿದೆ ಉಕ್ಕುಂದ ಗ್ರಾಮದ ನೀಲಪ್ಪ ಕಾನಬಸಣ್ಣನವರ ಹೇಳಿದರು.