ಸಾರಾಂಶ
ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ
ತಾಲೂಕಿನ ಕಡಕೋಳ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆದ ಕಾಮಗಾರಿಗಳು ಸಮರ್ಪಕವಾಗಿಲ್ಲ. ಜೆಎಂಎಂ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಗ್ರಾಪಂ ಸದಸ್ಯರೇ ಆರೋಪ ಮಾಡಿದ್ದಾರೆ.ಕಡಕೋಳ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯಡಿ ಜಲ್ಲಿಗೇರಿ ಗ್ರಾಮದಲ್ಲಿ ಮೇನ್‌ಗೇಟ್‌ನಿಂದ ರಂಗ ಮಂದಿರ ವರೆಗೆ ಸಿಸಿ ರಸ್ತೆ ಕಾಮಗಾರಿ ನಡೆಸಲಾಗಿದೆ. ಹಳೆಯ ಪ್ರಾಥಮಿಕ ಶಾಲಾ ಮೈದಾನ ಅಭಿವೃದ್ಧಿ, ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶೌಚಾಲಯ ಕಾಮಗಾರಿ, ಕಾಲೇಜು ಕಾಂಪೌಂಡ್ ಕಾಮಗಾರಿ ಪ್ರಗತಿಯಲ್ಲಿವೆ. ಅಲ್ಲದೇ ೧೩ ಮನೆ ನಿರ್ಮಾಣ ಕಾಮಗಾರಿ ನಡೆದಿವೆ. ೧೫ನೇ ಹಣಕಾಸು ಯೋಜನೆಯಡಿ ೧೦ ಸಿವಿಲ್ ಕಾಮಗಾರಿ ನಡೆದಿದ್ದು, ಇದರಲ್ಲಿ ೨ ಕಾಮಗಾರಿ ಮುಕ್ತಾಯವಾಗಿರುವುದಾಗಿ ಕಡಕೋಳ ಪಿಡಿಒ ಮಾಹಿತಿ ನೀಡಿದ್ದಾರೆ.
ತಾಲೂಕಿನ ಎಲ್ಲೆಡೆ ನರೇಗಾ ಕಾಮಗಾರಿ ಕುರಿತು ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ದಿನಕ್ಕೊಂದು ಗ್ರಾಪಂಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅಧಿಕಾರಿಗಳು ಕಡಕೋಳ ಗ್ರಾಪಂಗೆ ಬಂದೇ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ.ಜೆಜೆಎಂ ಕಾಮಗಾರಿ ವಿಫಲ: ಕಡಕೋಳ ಗ್ರಾಪಂ ವ್ಯಾಪ್ತಿಗೆ ಹೊಸಳ್ಳಿ, ಜಲ್ಲಿಗೇರಿ, ಜಲ್ಲಿಗೇರಿ ತಾಂಡಾ ಬರುತ್ತಿದೆ. ೧೪ ಸದಸ್ಯರಿದ್ದಾರೆ. ಒಟ್ಟು ೭,೫೦೦ ಜನಸಂಖ್ಯೆ ಇದೆ. ಈ ಎಲ್ಲ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ನಡೆದಿದೆ. ಆದರೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂಬುದು ಗ್ರಾಮಸ್ಥರ ಆರೋಪ. ಹಳೆಯ ಪೈಪ್‌ಗಳಿಗೆ ನಳ ಜೋಡಣೆ ಮಾಡಿ, ಲಕ್ಷಾಂತರ ಬಿಲ್ ಪಾವತಿಸಲಾಗಿದೆ ಎಂದು ಗಂಭೀರ ಆರೋಪ ಮಾಡುತ್ತಾರೆ. ಆರಂಭದಿಂದ ಜೆಜೆಎಂ ಕಾಮಗಾರಿ ಬಗ್ಗೆ ದೂರು ಕೇಳಿಬರುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕೆಲವೆಡೆ ಕಾಮಗಾರಿಯೇ ಮುಗಿದಿಲ್ಲ. ಕೆಲವೆಡೆ ಜನತೆಗೆ ಸಮರ್ಪಕವಾಗಿ ನೀರೇ ಸರಬರಾಜಾಗುತ್ತಿಲ್ಲ. ಪೈಪ್‌ಲೈನ್‌ಗಾಗಿ ಅಗೆದ ರಸ್ತೆಗಳನ್ನು ಸರಿಪಡಿಸದೇ ಬಿಲ್ ಪಡೆದುಕೊಂಡಿದ್ದಾರೆ ಎಂದು ಜನರು ಹೇಳುತ್ತಾರೆ.
ಜೆಜೆಎಂ ಕಾಮಗಾರಿ ಬಗ್ಗೆ 2023ರಲ್ಲೇ ಜಿಪಂ ಎಇಇ ಅವರಿಗೆ ವರದಿ ನೀಡಲಾಗಿದೆ. ಕಾಮಗಾರಿ ಯಾವ ಗ್ರಾಮದಲ್ಲೂ ಪೂರ್ಣಗೊಂಡಿಲ್ಲ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪೈಪ್‌ಲೈನ್‌ಗಾಗಿ ಅಗೆದ ಗುಂಡಿ ಮುಚ್ಚಿಲ್ಲ. ಗುಣಮಟ್ಟದ ಕಾಮಗಾರಿ ಮಾಡಿ ಎಂದು ತಾಕೀತು ಮಾಡಿದರೂ ಗುತ್ತಿಗೆದಾರರು ನಮ್ಮ ಮಾತಿಗೆ ಬೆಲೆ ನೀಡಿಲ್ಲ. ಒಟ್ಟಾರೆ ಕಾಮಗಾರಿ ತೃಪ್ತಿಕರವಾಗಿಲ್ಲ ಎಂದು ಕಡಕೋಳ ಪಿಡಿಒ ಸುಜಾತಾ ಕಪಲಿ ತಿಳಿಸಿದ್ದಾರೆ.ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಆರಂಭವಾಗಿಲ್ಲ. ದುಡಿಯುವ ವರ್ಗದ ಜನರಿಗೆ ಕೆಲಸವಿಲ್ಲದಂತಾಗಿದೆ. ಕಾಮಗಾರಿ ಕೈಗೆತ್ತಿಕೊಂಡಿರುವ ಕುರಿತು ಸಿದ್ಧಪಡಿಸಿದ ಕ್ರಿಯಾ ಯೋಜನೆಯ ಮಾಹಿತಿಯನ್ನು ಪಿಡಿಒ ಸದಸ್ಯರ ಗಮನಕ್ಕೆ ತಂದಿಲ್ಲ. ಪಂಚಾಯಿತಿಯಲ್ಲಿ ಏನು ನಡೆಯುತ್ತಿದೆ ಎಂಬುದು ಸದಸ್ಯರ ಗಮನಕ್ಕೆ ಬರುತ್ತಿಲ್ಲ ಎಂದು ಗ್ರಾಪಂ ಸದಸ್ಯ ಮಾರ್ತಂಡಪ್ಪ ಹಾದಿಮನಿ ಹೇಳಿದ್ದಾರೆ.