ನರೇಂದ್ರ ಮೋದಿ ಸ್ವಾರ್ಥರಹಿತವಾಗಿ ದೇಶಕ್ಕಾಗಿ ದುಡಿಯುತ್ತಿರುವ ಶ್ರೇಷ್ಠ ರಾಜನೀತಿಜ್ಞ ಹಾಗೂ ರಾಜಕೀಯ ಸಂತ. ಅವರೊಂದಿಗೆ ನಾವೂ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು.

ಕಾರವಾರ: ರಾಷ್ಟ್ರ ವಿರೋಧಿ ಚಿಂತನೆಯನ್ನು ಮಟ್ಟಹಾಕುವ ಜತೆಗೆ ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ ಕಾರ್ಣಿಕ್ ಕರೆ ನೀಡಿದರು.ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಜನಸೇವೆಯ ಅಂಗವಾಗಿ ದೇಶಾದ್ಯಂತ ನಡೆಯುತ್ತಿರುವ ‘ಸೇವಾ ಪಾಕ್ಷಿಕ’ದ ಹಿನ್ನೆಲೆಯಲ್ಲಿ ನಗರದ ದೈವಜ್ಞ ಭವನದಲ್ಲಿ ಆಯೋಜಿಸಿದ್ದ ‘ಸೇವಾ ಜ್ಯೋತಿ’ ಹಾಗೂ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.ನರೇಂದ್ರ ಮೋದಿ ಸ್ವಾರ್ಥರಹಿತವಾಗಿ ದೇಶಕ್ಕಾಗಿ ದುಡಿಯುತ್ತಿರುವ ಶ್ರೇಷ್ಠ ರಾಜನೀತಿಜ್ಞ ಹಾಗೂ ರಾಜಕೀಯ ಸಂತ. ಅವರೊಂದಿಗೆ ನಾವೂ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ನಮಗೇನು ಲಾಭ ಎಂಬ ಸ್ವಾರ್ಥದ ಚಿಂತನೆ ಬಿಟ್ಟು ದೇಶದ ಹಿತಕ್ಕಾಗಿ ಕೆಲಸ ಮಾಡಬೇಕು ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಹಗರಣಗಳೇ ಪ್ರಮುಖ ಸುದ್ದಿಯಾಗುತ್ತಿದ್ದವು. ಆದರೆ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಅಭಿವೃದ್ಧಿಯನ್ನು ಕೇಂದ್ರವಾಗಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.ದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆಯುಷ್ಮಾನ್ ಭಾರತ ಯೋಜನೆ ಬಡವರಿಗೆ ವರದಾನವಾಗಿದೆ. ದೇಶ ಅಭಿವೃದ್ಧಿಯತ್ತ ಮುನ್ನಡೆಯುತ್ತಿದ್ದು, ಈ ಪ್ರಗತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕು ಎಂದು ಕಾರ್ಣಿಕ ಹೇಳಿದರು.

2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಎಲ್ಲರೂ ಕೈಜೋಡಿಸಬೇಕು. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಆಶಯದೊಂದಿಗೆ ದೇಶವನ್ನು ಮುನ್ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿಯೂ ಬದಲಾವಣೆ ತರಬೇಕೆಂಬ ದೃಢ ಸಂಕಲ್ಪ ಮಾಡಿದರೆ ಅದು ಸಾಧ್ಯ ಎಂದರು.ದೇಶದ ಪ್ರಗತಿಗೆ ಕೈಜೋಡಿಸಿ: ರೂಪಾಲಿ ನಾಯ್ಕ

ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ವೈಯಕ್ತಿಕ ಸ್ವಾರ್ಥವಿಲ್ಲದೆ ದೇಶಕ್ಕಾಗಿ ದುಡಿಯುತ್ತಿದ್ದಾರೆ. 2047ರ ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳ್ಳಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.ಮೋದಿ ಅವರ ಸಾಧನೆ, ಅಭಿವೃದ್ಧಿಯ ಕಲ್ಪನೆ ಹಾಗೂ ಜನಪರ ಯೋಜನೆಗಳ ಮಾಹಿತಿಯನ್ನು ದೇಶದ ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪಿಸುವ ಉದ್ದೇಶದಿಂದ ಯೋಜನೆಗಳನ್ನು ರೂಪಿಸಲಾಗುತ್ತಿದೆ. ದೇಶದ ಪ್ರಗತಿಯಲ್ಲಿ ನಾವೂ ಪಾಲುದಾರರಾಗಬೇಕು ಎಂದು ಕರೆ ನೀಡಿದರು.

ಸೇವಾ ಜ್ಯೋತಿ ಹಾಗೂ ಪಾದಯಾತ್ರೆ, ಸಮಾಜದಲ್ಲಿ ನಮ್ಮ ಕರ್ತವ್ಯದ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದರು.ಗಜಾನನ ಗುನಗಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಕೆ.ಜಿ. ನಾಯ್ಕ, ವೆಂಕಟೇಶ ನಾಯಕ, ಪ್ರಮುಖರಾದ ಗೋವಿಂದ ನಾಯ್ಕ, ಈಶ್ವರ ನಾಯ್ಕ, ಎಂ.ಜಿ. ಭಟ್ ಇದ್ದರು. ಶಿವಾಜಿ ನರಸಾನಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ನಾಗೇಶ ಕುರ್ಡೆಕರ, ಸುಭಾಸ ಗುನಗಿ, ಶುಭಂ ಕಳಸ ಸಹಕರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರಪ್ರಸಾರವನ್ನು ಕುತೂಹಲ, ಉತ್ಸಾಹದಿಂದ ವೀಕ್ಷಿಸಲಾಯಿತು. ನಂತರ ಸುಭಾಸವೃತ್ತದ ಮೂಲಕ ನಗರದಾದ್ಯಂತ ಮೆರವಣಿಗೆ ನಡೆಸಿದರು.