ರಾಜ್ಯ ಕಾಂಗ್ರೆಸ್‌ ಸರ್ಕಾರ ಸುಳ್ಳು ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದಿದೆ

ಯಲಬುರ್ಗಾ: ನರೇಂದ್ರ ಮೋದಿ ಅವರು ತಮ್ಮ 10 ವರ್ಷಗಳ ಸುದೀರ್ಘ ಆಡಳಿತಾವಧಿಯಲ್ಲಿ ದೇಶವನ್ನು ಸಾಕಷ್ಟು ಅಭಿವೃದ್ಧಿಗೊಳಿಸುವ ಮೂಲಕ ವಿಶ್ವವೇ ಮೆಚ್ಚುವಂತಹ ಪ್ರಧಾನಿಯಾಗಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ತಾಲೂಕಿನ ವಜ್ರಬಂಡಿ, ಗೆದಗೇರಿ ಗ್ರಾಮಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯೋಜನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ೨೦೨೪ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ೩ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಿಳೆಯರಿಗಾಗಿ ಉಜ್ವಲ ಯೋಜನೆಯಡಿ ೩೭೫೦ ಲಕ್ಷ ಎಲ್‌ಪಿಜಿ ಗ್ಯಾಸ್ ವಿತರಣೆ, ದೀನ್ ದಯಾಳ್ ಅಂತೋದಯ ಯೋಜನೆ, ಡ್ರೋನ್ ಯಂತ್ರ ಯೋಜನೆ, ನಾಲ್ಕು ಕೋಟಿಗೂ ಅಧಿಕ ಅರ್ಹ ಫಲಾನುಭವಿಗಳಿಗೆ ಮನೆಗಳ ವಿತರಣೆ, ಆಯುಷ್ಮಾನ್ ಭಾರತದ ಅಡಿ ೨೫,೦೦೦ ಸಾವಿರ ಕೋಟಿ, ಪ್ರಧಾನಮಂತ್ರಿಯ ಜಲಜೀವನ್ ಮಿಷನ್ ಯೋಜನೆ, ೮೬೦೦ ಕೋಟಿ ರೈತರಿಗೆ ಸಾಲದ ಗ್ಯಾರಂಟಿ, ೭೦ ವಂದೇ ಭಾರತ ರೈಲ್ವೆ ಯೋಜನೆ, ಮಹಿಳೆಯರಿಗೆ ಹೊಗೆ ರಹಿತ ಅಡುಗೆ ಯಂತ್ರ ಉಜ್ವಲ ಯೋಜನೆಯ ಗ್ಯಾಸ್ ಕನೆಕ್ಷನ್ ರೂಪದಲ್ಲಿ ೧೦ ಕೋಟಿಗೊ ಹೆಚ್ಚು ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ವಿತರಣೆ ಹೀಗೆ ಉಪಯುಕ್ತ ಯೋಜನೆಗಳನ್ನು ಉಚಿತವಾಗಿ ನೀಡಿದ್ದಾರೆ ಎಂದು ಹೇಳಿದರು.

ಈ ಕ್ಷೇತ್ರದಲ್ಲಿ ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಕೇಂದ್ರ ಸರ್ಕಾರ ಒಳಾಂಗಣ ಕ್ರೀಡಾಂಗಣ, ಸುಲಭ ಸಂಚಾರದ ಅನೇಕ ಫ್ಲೈ ಓವರ್‌ಗಳು, ಕಾರ್ಮಿಕರ ಆರೋಗ್ಯ ತಪಾಸಣೆಯ ಆಸ್ಪತ್ರೆ ಹೀಗೆ ಜನಕಲ್ಯಾಣದ ಕಾರ್ಯಕ್ರಮಗಳು ಅನುಷ್ಠಾನಕ್ಕೆ ತರುವಲ್ಲಿ ಪ್ರಧಾನಿ ನರೇಂದ್ರ ಮೋದಿˌಕೇಂದ್ರ ಭೂಸಾರಿಗೆ ಸಚಿವ ನಿತೀನ ಗಡ್ಕರಿ ಅಮೋಘ ಕೊಡುಗೆ ದೇಶದ ಜನತೆ ಎಂದೂ ಮರೆಯಲೂ ಸಾಧ್ಯವಿಲ್ಲ ಎಂದು ಗುಣಗಾನ ಮಾಡಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ವಿವರಣೆ ನೀಡಿದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರ ಸುಳ್ಳು ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು.

ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರು, ಗಣ್ಯರಾದ ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಶಂಕರಗೌಡ್ರ ಚಿಕ್ಕಬನ್ನಿಗೋಳ, ಅರವಿಂದಗೌಡ ಪಾಟೀಲ, ಶಿವಶಂಕರ ದೇಸಾಯಿ, ಮಾರುತಿ ಗಾವರಾಳ, ಕೊಟ್ರಪ್ಪ ತೋಟದ, ವೀರಣ್ಣ ಉಳ್ಳಾಗಡ್ಡಿ ಸೇರಿದಂತೆ ಮತ್ತಿತರರು ಇದ್ದರು.