ಬರಗಾಲ ಘೋಷಣೆಗಾಗಿ ಆಗ್ರಹಿಸಿ ಪಟ್ಟಣದಲ್ಲಿ ಮಹದಾಯಿಗಾಗಿ ಮಹಾವೇದಿಕೆ ಆಶ್ರಯದಲ್ಲಿ ವಿವಿಧ ರೈತ, ಕನ್ನಡ, ದಲಿತ ಪರ ಸಂಘಟನೆಗಳು ಕರೆ ನೀಡಿದ್ದ ನರಗುಂದ ಬಂದ್‌ ಕರೆ ಶನಿವಾರ ಸಂಪೂರ್ಣ ಯಶಸ್ವಿಯಾಯಿತು. ಇಡೀ ಪಟ್ಟಣ ಬೆಳಗ್ಗೆ ಸಂಜೆಯವರೆಗೂ ಸ್ತಬ್ಧವಾಗಿತ್ತು.

ಕನ್ನಡಪ್ರಭ ವಾರ್ತೆ ನರಗುಂದ

ಬರಗಾಲ ಘೋಷಣೆಗಾಗಿ ಆಗ್ರಹಿಸಿ ಪಟ್ಟಣದಲ್ಲಿ ಮಹದಾಯಿಗಾಗಿ ಮಹಾವೇದಿಕೆ ಆಶ್ರಯದಲ್ಲಿ ವಿವಿಧ ರೈತ, ಕನ್ನಡ, ದಲಿತ ಪರ ಸಂಘಟನೆಗಳು ಕರೆ ನೀಡಿದ್ದ ನರಗುಂದ ಬಂದ್‌ ಕರೆ ಶನಿವಾರ ಸಂಪೂರ್ಣ ಯಶಸ್ವಿಯಾಯಿತು. ಇಡೀ ಪಟ್ಟಣ ಬೆಳಗ್ಗೆ ಸಂಜೆಯವರೆಗೂ ಸ್ತಬ್ಧವಾಗಿತ್ತು.

ಬಂದ್‌ ಕರೆಯಿಂದ ಬಸ್ ಸಂಚಾರ ಸಂಪೂರ್ಣ ಬಂದ್‌ ಆಗಿದ್ದು, ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವಂತಾಯಿತು. ಇನ್ನು ಅಂಗಡಿ, ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು.

ರೈತರು ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಪಟ್ಟಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅರಿಷಿಣಗೋಡಿ ರೈತ ಸಂಗಪ್ಪ ಮಾಳಪ್ಪನವರ ಮಾತನಾಡಿ, ನಮ್ಮ ಸರ್ಕಾರಗಳು ದೇಶದ ವಿವಿಧ 20 ಯೋಜನೆಗಳಿಗೆ ಅರಣ್ಯ ಮತ್ತು ವನ್ಯಜೀವಿಗಳ ಇಲಾಖೆ ಮೂಲಕ ಪರವಾನಗಿ ನೀಡಿವೆ. ಆದರೆ ನಮ್ಮ ಮಹದಾಯಿ ಯೋಜನಗೆ ಏಕೆ ಪರವಾನಗಿ ನೀಡಿಲ್ಲವೆಂದು ಪ್ರಶ್ನೆ ಮಾಡಿದರು. ಕೆಲವು ರೈತರು ರಾಜಕೀಯ ಪಕ್ಷಕ್ಕೆ ಅಂಟಿಕೊಂಡಿದ್ದಾರೆ. ರೈತರು ಕುಡಿತದಿಂದ ಹೊರ ಬಂದು ಒಗ್ಗಟ್ಟಾಗುವವರೆಗೂ ನಮ್ಮ ಬೇಡಿಕೆ ಈಡೇರುವುದಿಲ್ಲವೆಂದು ತಿಳಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ, ಭಾರತೀಯ ಕಿಸಾನ್‌ ಸಂಘ, ವರ್ತಕರ ಸಂಘ, ನ್ಯಾಯವಾದಿಗಳ ಸಂಘ, ಕರವೇ, ದಲಿತ ಸಂಘಟನೆ, ಕೂಲಿ ಕಾರ್ಮಿಕರ ಸಂಘ, ಹಮಾಲರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ ಕರೆಗೆ ಬೆಂಬಲ ನೀಡಿದ್ದವು.

ಪಟ್ಟಣದ ಎಲ್ಲಾ ವ್ಯಾಪಾರಸ್ಥರು ಸ್ವಇಚ್ಛೆಯಿಂದ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್‌ ಮಾಡಿ ಸಹಕಾರ ನೀಡಿದರೆ, ಇನ್ನು ಉಳಿದ ಸಂಘಟನೆಯವರು ಈ ಹೋರಾಟದಲ್ಲಿ ಪಾಲ್ಗೊಂಡು ನರಗುಂದ ಬಂದ್‌ ಕರೆಯನ್ನು ಯಶಸ್ವಿಗೊಳಿಸಿದರು.ಜಿಲ್ಲಾಧಿಕಾರಿಗೆ ರೈತರ ಮನವಿ:

ಶನಿವಾರ ನರಗುಂದ ಬಂದ್‌ ಕರೆ ಹಿನ್ನೆಲೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಪಟ್ಟಣದ ಮಹದಾಯಿಗಾಗಿ ಮಹಾವೇದಿಕೆಗೆ ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿದರು.ನಂತರ ಮಾತನಾಡಿದ ಅವರು, ಬರಗಾಲ ಘೋಷಣೆ, ಕೃಷಿ ಸಾಲಮನ್ನಾ, ಕುಡಿಯುವ ನೀರು ಪೂರೈಕೆ, ಮಹದಾಯಿ ಯೋಜನೆ ಜಾರಿಯಾಗಲು ಸರ್ವ ಪಕ್ಷದ ಸಭೆಯ ಬೇಡಿಕೆ, ಜಾನುವಾರುಗಳಿಗೆ ಮೇವು ಪೂರೈಕೆ, ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಪರಿಹಾರ, ದುಡಿಯುವ ಕೈಗಳಿಗೆ ಉದ್ಯೋಗ ಸೇರಿ ವಿವಿಧ ಬೇಡಿಕೆಯನ್ನು ಸರ್ಕಾರಕ್ಕೆ ತಿಳಿಸಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ ಎಚ್.ಎನ್., ತಹಸೀಲ್ದಾರ ಶ್ರೀಶೈಲ ತಳವಾರ, ಕಂದಾಯ ನಿರೀಕ್ಷಕ ಎಸ್.ಎಲ್. ಪಾಟೀಲ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಸತ್ಯಪ್ಪ ಮಾಳಗೊಂಡ, ರೈತ ಮುಖಂಡರು ಇದ್ದರು.