ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಯುವಜನತೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಗ್ರಾಮದ ಸಾಧಕರನ್ನು ಗುರುತಿಸಿ ಅಭಿನಂದಿಸುವ ನಿಟ್ಟಿನಲ್ಲಿ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯ ಪಟ್ಟರು.ನರಿಮೊಗರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಶತ ಸಂಭ್ರಮ ವೇದಿಕೆಯಲ್ಲಿ ನಡೆದ ‘ಗ್ರಾಮ ಸಾಹಿತ್ಯ ಸಂಭ್ರಮ ಸರಣಿ -೧೬’ ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಕ್ಷೇತ್ರದಲ್ಲಿನ ಸಾಧಕರನ್ನು ಅಭಿನಂದಿಸಿ ಅವರು ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಗ್ರಾಮ ಪಂಚಾಯಿತಿ ನರಿಮೊಗರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಸಹಕಾರದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರ ಪೋಷಕತ್ವದಲ್ಲಿ, ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ ಅಂಗವಾಗಿ ಕಾರ್ಯಕ್ರಮ ಏರ್ಪಟ್ಟಿತು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ ಬರವಣಿಗೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲೇ ಈ ಕಾರ್ಯಕ್ರಮ ನಡೆಯುತ್ತಿದ್ದು, ವಿದ್ಯಾರ್ಥಿಗಳೇ ಸರ್ವಾಧ್ಯಕ್ಷತೆ ಮತ್ತು ಸಮಾರೋಪ ಭಾಷಣಗಾರರಾಗಿರುವುದು ಒಂದು ವಿನೋತನ ಪ್ರಯೋಗವಾಗಿದೆ. ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ಒದಗಿಸಿ ಬೆಳೆಸುವ ಹಾಗೂ ಮಕ್ಕಳು ಸಂಭ್ರಮಿಸುವ ಸಾಹಿತ್ಯ ಹಬ್ಬ ಇದಾಗಿದೆ ಎಂದರು.ಸಾಂದೀಪನಿ ವಿದ್ಯಾ ಸಂಸ್ಥೆ ಅಧ್ಯಕ್ಷ ಜಯರಾಮ ಕೆದಿಲಾಯ ಉದ್ಘಾಟಿಸಿದರು. ಪುಟಾಣಿ ಪೂಜಾಶ್ರೀ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷತೆ ವಹಿಸಿದ್ದರು. ಪುಟಾಣೀ ಧವನ್ ಕುಮಾರ್ ಸಮಾರೋಪ ಭಾಷಣ ಮಾಡಿದರು.
ನರಿಮೊಗರು ಸಿ ಆರ್ ಪಿ ಪರಮೇಶ್ವರಿ ಪ್ರಸಾದ್, ನರಿಮೊಗರು ಎಸ್‌ಡಿಎಂ ಅಧ್ಯಕ್ಷ ಕೃಷ್ಣರಾಜ ಜೈನ್ ಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಗ್ರಾಮದಲ್ಲಿನ ಸಾಹಿತ್ಯ ಕ್ಷೇತ್ರದ ಸಾಧಕ ಅವಿನಾಶ್ ಕೊಡಂಕಿರಿ, ಪರೀಕ್ಷಿತ್ ತೋಳ್ಪಾಡಿ, ನಾಟಿ ವೈದ್ಯೆ ಯಮುನಾ ಪೂಜಾರಿ, ಜಾನಪದ ಕ್ಷೇತ್ರದ ಸುಧಾಕರ್ ಕುಲಾಲ್, ಶಿಕ್ಷಣ ಕ್ಷೇತ್ರದ ಸವಿತಾ ಕುಮಾರಿ ಎಂ. ಡಿ, ಕಲೆ ಮತ್ತು ಸಾಹಿತ್ಯ ಕ್ಷೇತ್ರದ ವಿದ್ವಾನ್ ಗೋಪಾಲಕೃಷ್ಣ, ಸಾಹಿತ್ಯ, ವೈದ್ಯಕೀಯ ಮತ್ತು ಜನಜಾಗೃತಿ ಕ್ಷೇತ್ರದ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಕೃಷಿ ಕ್ಷೇತ್ರದ ಜಯರಾಮ ಕೆದಿಲಾಯ, ಹೈನುಗಾರಿಕೆ ಕ್ಷೇತ್ರದ ಜಯಗುರು ಹಿಂದಾರು, ಶಿಕ್ಷಣ, ಕಲೆ ಮತ್ತು ಪರಿಸರ ಜಾಗೃತಿಯಲ್ಲಿ ಮಾಡಿರುವ ಸಾಧನೆಗಾಗಿ ತಾರಾನಾಥ್ ಪಿ. ಸವಣೂರು ಅವರನ್ನು ಲಕ್ಷ್ಮೀಶ ತೋಳ್ಪಾಡಿ ಅವರು ಗೌರವಿಸಿದರು.
ನಾರಾಯಣ ಕುಂಬ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಗುರು ಶ್ರೀಲತಾ ರೈ ಸ್ವಾಗತಿಸಿದರು. ಜಗದೀಶ್ ಬಾರಿಕೆ ಮತ್ತು ಸುಪ್ರೀತಾ ಚರಣ್ ಪಾಲಪ್ಪೆ ನಿರೂಪಿಸಿದರು.