ಸಾರಾಂಶ
ಸೊರಬ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗುಪ್ತಗಾಮಿನಿಯಾಗಿ ಜೀವನ ಮತ್ತು ಜೀವವನ್ನು ಮುಟಿಪಾಗಿಟ್ಟಿದ್ದ ಮಹಿಳಾ ಹೋರಾಟಗಾರರಿಗೆ ದಿಟ್ಟತನದಿಂದ ಬೆನ್ನೆಲುಬಾಗಿ ನಿಂತ ನಾರಿಶಕ್ತಿ ಇತಿಹಾಸ ಪುಟಗಳಲ್ಲಿ ಅಜರಾಮರ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ನುಡಿದರು.
ಭಾನುವಾರ ಪಟ್ಟಣದ ಮುರುಘಾ ಮಠದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.ಸಮಾಜದಲ್ಲಿ ಮಹಿಳೆಯರ ಪಾತ್ರ ಕೇವಲ ಕುಟುಂಬ ನಿರ್ವಹಣೆಗಷ್ಟೇ ಸೀಮಿತವಾಗಿಲ್ಲ. ಇತಿಹಾಸದುದ್ದಕ್ಕೂ ಸ್ವಾತಂತ್ರ್ಯಕ್ಕಾಗಿ, ಸಾಮಾಜಿಕ ಸಮಾನತೆ, ಆರ್ಥಿಕ ಮತ್ತು ರಾಜಕೀಯವಾಗಿ ಹೋರಾಟಗಳನ್ನು ಮಾಡುತ್ತಲೇ ಬಂದಿದ್ದಾರೆ. ಹಾಗಾಗಿ, ಮಹಿಳೆ ಅದ್ಭುತ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅವರನ್ನು ಗೌರವಿಸುವುದು ಪುಣ್ಯದ ಕೆಲಸ ಎಂದರು.
ಅಧ್ಯಕ್ಷತೆವಹಿಸಿದ್ದ ಬ್ರಹ್ಮಕುಮಾರಿ ರಾಜಯೋಗಿನಿ ಕುಮಾರಿ ಚೇತನಕ್ಕ ಮಾತನಾಡಿ, ನಾರಿಶಕ್ತಿ ಜಗತ್ತಿಗೆ ಪರಿಚಯಿಸಿದ ಅದ್ಭುತ ರಾಷ್ಟ್ರ ಭಾರತ. ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡುವ ಮೂಲಕ ಕುಟುಂಬ ನಿರ್ವಹಣೆಯೊಂದಿಗೆ ಸಮಾಜ ಕಟ್ಟುವ ಮಹಿಳೆಗೆ ಎಲ್ಲಾ ಕ್ಷೇತ್ರದಲ್ಲಿ ಸವಾಲು, ಸಮಸ್ಯೆಗಳು ಜಾಸ್ತಿ. ಎಲ್ಲವನ್ನು ಎದುರಿಸಿ ಹಿಂದೆ ನೋಡದೇ ಮುನ್ನಡೆಯುವ ಶಕ್ತಿ ಮಹಿಳೆಗಿದೆ ಎಂದರು.ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ ಶೇಟ್ ಮಾತನಾಡಿ, ಮಹಿಳೆ ನಾಲ್ಕು ಗೋಡೆಗಳ ನಡುವೆ ಕಾಲಕಳೆಯುವ ಕಾಲವೀಗ ಕಣ್ಮರೆಯಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಪುರುಷರಷ್ಟೇ ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆ ಎಂದು ಹಲವಾರು ರೀತಿಯ ಸಾಧನೆಗಳ ಮೂಲಕ ತೋರಿಸಿದ್ದಾಳೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆನವಟ್ಟಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಸುಪ್ರಿಯಾ, ಕೋಟಿಪುರ ಎವರಾನ್ ಸ್ಕೂಲ್ ಅಧ್ಯಕ್ಷೆ ಚರಿತಾ ಕಾರ್ತಿಕ್, ಗುಡವಿ ದಂತವೈದ್ಯೆ ಡಾ.ಎಚ್.ಪವಿತ್ರ ರಾಯ್ಕರ್ ಸಂಗೀತ ಕಲಾವಿದೆ ಲಕ್ಷ್ಮೀ ಮುರಳೀಧರ, ರಕ್ಷಣಾ ಇಲಾಖೆಯ ಎಂ.ಬಿ.ಉಷಾ ಮತ್ತು ಅಂಗನವಾಡಿ ಕಾರ್ಯಕರ್ತೆ ಕೆ.ಎಲ್.ಜ್ಯೋತಿರ್ಮಾಲ ಚಂದ್ರಗುತ್ತಿ ಅವರನ್ನು ಸನ್ಮಾನಿಸಲಾಯಿತು.ಡಾ.ಬಿ.ಎಂ.ಸೌಭಾಗ್ಯ, ಸೊರಬ ಆರಕ್ಷಕ ಠಾಣೆಯ ಪಿಎಸ್‌ಐ ನಾಗರಾಜ, ವಿಜಯಕುಮಾರ್ ದಟ್ಟರ್, ರಾಜು ಹಿರಿಯಾವಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸುಬ್ರಾಯ ನಾಯ್ಕ, ಎಸ್. ಮಂಜುನಾಥ ಮೊದಲಾದವರಿದ್ದರು.